ಉಳ್ಳಾಲ: ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸಿಗೆ ಈಗಿನ ಪ್ರಧಾನಿ ನರೇಂದ್ರ ಮೋದಿ ಮರು ಚಾಲನೆ ನೀಡಿದ್ದರಿಂದ ಇಂದು ಭಾರತದಾದ್ಯಂತ ಜಾತಿ, ಮತ, ಭೇದವಿಲ್ಲದೆ ಸ್ವಚ್ಛತೆ ಬಗ್ಗೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಮಂಗಳವಾರ ಮುಡಿಪುವಿನಲ್ಲಿ ಸ್ಕೌಟ್ಸ್, ಗೈಡ್ಸ್ ಮತ್ತು ಬುಲ್ ಬುಲ್ ಮಕ್ಕಳಿಂದ ನಡೆದ ಸ್ಚಚ್ಛತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಮುಡಿಪುವಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಲವು ಬಾರಿ ನಡೆದಿದೆ. ಈಗ ಶಾಲಾ ಮಕ್ಕಳಿಂದ ಕಾರ್ಯಕ್ರಮ ನಡೆಯುತ್ತಿದ್ದು ಎಳೆ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು.

ಕಸ ಹೆಕ್ಕಿ ಪರಿಸರ ಸ್ವಚ್ಛತೆ ಮಾಡುವ ಬದಲು ಕಸ ಎಸೆಯದೆ ಸ್ವಚ್ಛತೆ ಕಾಪಾಡುವುದು ಉತ್ತಮ. ಮುಡಿಪುವಿನಲ್ಲಿ ದ್ರವ ತ್ಯಾಜ್ಯ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಇಲಾಖೆ ಬೇಜವಾಬ್ದಾರಿಯಿಂದಾಗಿ ಎರಡು ವರ್ಷಗಳಿಂದ ಶಂಕು ಸ್ಥಾಪನೆಯೂ ಮಾಡಲು ಆಗಿಲ್ಲ ಎಂದು ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವದಾಸ್ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೋಡೆಲ್ ಅಧಿಕಾರಿ ಗುರುನಾಥ ಬಾಗೇವಾಡಿ, ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಬಿ.ಎಸ್.ಪಲ್ಲಕ್ಕಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ಯಾಮಲ, ಮಲಾರ್ ಸೆಂಟ್ರಲ್ ಮುಸ್ಲಿಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ.ಮಲಾರ್ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ ಸ್ವಾಗತಿಸಿದರು. ಶಿಕ್ಷಕ ಮಹಮ್ಮದ್ ಕಲ್ಲರಕೋಡಿ ವಂದಿಸಿದರು.
`ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಕ್ಕಳನ್ನು ಹೆಚ್ಚು ಹೊತ್ತು ತೊಡಗಿಸಿಕೊಳ್ಳುವಂತೆ ಮಾಡಲು ಸಾಧ್ಯವಿಲ್ಲದ ಕಾರಣ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುಳವ ಪ್ರಯತ್ನ ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ಕಾರ್ಯದಲ್ಲಿ ಪಾಲ್ಗೊಳ್ಳುವುದು ಮುಖ್ಯ’
-ಶೇಷಶಯನ ಕಾರಿಂಜ, ಕ್ಷೇತ್ರ ಶಿಕ್ಷಣಾಧಿಕಾರಿ






