UN NETWORKS
ಕೊಣಾಜೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ(ರಿ) ಮಂಗಳೂರು ಇದರ ವತಿಯಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ವಿಶೇಷ ಸಾಧನೆಗೈದ ಕೊಣಾಜೆ ವಿಜಯ ಗ್ರಾಮಾಭಿವೃದ್ಧಿ ಸಮಿತಿಗೆ ಸತತ ಎರಡನೇ ಬಾರಿ ಗ್ರಾಮಾಭಿವೃದ್ಧಿ ಪುರಸ್ಕಾರ ಲಭಿಸಿದೆ.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಮಂಗಳೂರಿನ ವಿಜಯ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಪುರಸಾರ್ಕವನ್ನುನೀಡಲಾಯಿತು.
ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಗಿಡ ನೆಡುವ ಕಾರ್ಯಕ್ರಮ, ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ಕಾರ್ಯಗಾರ, ಜಲ ಸಂರಕ್ಷಣೆಗೆ ಇಂಗು ಗುಂಡಿ ನಿರ್ಮಾಣ, ಕೊಳವೆ ಬಾವಿಗೆ ನೀರು ಇಂಗಿಸುವ ಕಾರ್ಯಕ್ರಮ, ಕೆರೆ ಅಭಿವೃದ್ಧಿ, ಕಾಲೇಜು ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಬಗ್ಗೆ ಮಾಹಿತಿ ಕಾರ್ಯಗಾರ, ಪ್ರೌಢಶಾಲಾ ಮಕ್ಕಳಿಗೆ ತೋಟಗಾರಿಕೆ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರ, ಸರಕಾರಿ ಪ್ರೌಢಶಾಲೆಗಳಲ್ಲಿ ಕೃಷಿಕ ಸಂಘಗಳ ನಿರ್ಮಾಣ, ಡಿಜಿಟಲ್ ಬ್ಯಾಂಕಿಂಗ್ ಕಾರ್ಯಗಾರ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಮೊದಲಾದ ಕಾರ್ಯಕ್ರಮಗಳನ್ನು ಕೊಣಾಜೆ ವಿಜಯ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೊಣಾಜೆ ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಕಾರ್ಯದರ್ಶಿ ಅಚ್ಯುತ ಗಟ್ಟಿ, ಸದಸ್ಯರಾದ ಶ್ರೀನಿವಾಸ ಇನ್ನವಳ್ಳಿ, ಬಿ.ಪಿ.ಆಚಾರ್, ಶಂಕರಭಟ್ ಅವರು ಪುರಸ್ಕಾರವನ್ನು ಸ್ವೀಕರಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರೇಮನಾಥ್ ಆಳ್ವ, ಕಾರ್ಯದರ್ಶಿ ರಾಜೇಂದ್ರ ರೈ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಉದಯ ಹೆಗ್ಡೆ ಮೊದಲಾದವರು ಇದ್ದರು.


