UN NETWORKS
ತಲಪಾಡಿ: ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸಿ, ಅವರ ಕಷ್ಟಗಳಿಗೆ ಸ್ಪಂಧಿಸುವ ಉದ್ದೇಶವನ್ನು ಪಕ್ಷ ಹೊಂದಿದೆ. ಇದನ್ನು ಮುಂದಿಟ್ಟುಕೊಂಡು ಕಾರ್ಯಕರ್ತರು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಾಚರಿಸಬೇಕಿದೆ ಎಂದು ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ ರಝಾಕ್ ಹೇಳಿದ್ದಾರೆ.
ಅವರು ತಲಪಾಡಿಯಲ್ಲಿ ಮುಸ್ಲಿಂ ಲೀಗ್ ಪಕ್ಷದ ಕಚೇರಿಯ ಉದ್ಘಾಟನಾ ಸಮಾರಂಭ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮುದಾಯಗಳ ನಡುವೆ ಬಿಕ್ಕಟ್ಟನ್ನು ಸೃಷ್ಟಿಸುವ ಕೆಲಸವನ್ನು ಲೀಗ್ ಪಕ್ಷ ಮಾಡುತ್ತಿಲ್ಲ. ಇದರಿಂದಾಗಿ ಕೇರಳದಲ್ಲಿ ಅಸ್ತಿತ್ವವವನ್ನು ಸ್ಥಾಪಿಸಿರುವ ಪಕ್ಷ, ಅಧಿಕಾರವನ್ನು ಸ್ಥಾಪಿಸಿದೆ. ಪ್ರತಿ ಗ್ರಾ.ಪಂಗಳಲ್ಲಿ ಅಧಿಕಾರದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸೌಹಾರ್ದಯುತವಾಗಿ ತೊಡಗಿಸಿಕೊಂಡಿರುವುದರಿಂದ ಎಲ್ಲಾ ರೀತಿಯಲ್ಲೂ ಬೆಂಬಲ ದೊರೆಯುತ್ತಿದೆ. ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ಲೀಗ್ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿ ಂ ಲೀಗ್ ಅಧ್ಯಕ್ಷ ಸಿದ್ದೀಖ್ ಎ.ಕೆ ಬಂಟ್ವಾಳ್ ಮಾತನಾಡಿ ಕರ್ನಾಟಕ ಮತ್ತು ಜಿಲ್ಲೆಗೆ ಲೀಗ್ ಪಕ್ಷ ಹೊಸತಲ್ಲ. ರಾಜ್ಯದಲ್ಲಿ ಓರ್ವ ಶಾಸಕನಿದ್ದು, ಹಲವೆಡೆ ಗ್ರಾಮ ಪಂಚಾಯತ್ ಸದಸ್ಯರುಗಳು ಪಕ್ಷದವರಿದ್ದಾರೆ. ಪಕ್ಷ ಇನ್ನಷ್ಟು ಬಲಿಷ್ಠವಾಗುವ ಉದ್ದೇಶದೊಂದಿಗೆ ಸ್ಥಾಪನೆಗೊಂಡ ಲೀಗ್ ಕಚೇರಿ ಜನರ ಕಷ್ಟಗಳಿಗೆ ಸ್ಪಂಧಿಸುವುದರ ಜತೆಗೆ ಕಾರ್ಯಾಚರಿಸಲಿ ಎಂದರು.
ದ.ಕ ಜಿಲ್ಲಾ ಯೂತ್ ಲೀಗ್ ಅಧ್ಯಕ್ಷ ಸಿದ್ದೀಖ್ ತಲಪಾಡಿ ಮಾತನಾಡಿ ಚುನಾವಣೆಗೆ ಬಂದಾಗ ಪಕ್ಷದ ಸ್ಥಾಪನೆ ಆಗುತ್ತಿರುವ ಆರೋಪ ಮಾಡುತ್ತಿದ್ದಾರೆ. ಎಂಟು ಲಕ್ಷ ಮುಸ್ಲಿಮರಿಗೆ ನ್ಯಾಯಯುತ ವೇದಿಕೆ ನಿರ್ಮಿಸುವ ಉದ್ದೇಶದಿಂದ ಪಕ್ಷವನ್ನು ಸ್ಥಾಪಿಸಲಾಗಿದೆ. ಅಲ್ಲಾಹು ಮೆಚ್ಚುವಂತಹ ಕೆಲಸ ಮಾಡಬೇಕಿದೆ ಹೊರತು ಇನ್ನೊಬ್ಬರಿಗೆ ತೊಂದರೆ ನೀಡಿ ಹೋಗುವಂತಹ ಕಾರ್ಯಕರ್ತರು ಲೀಗ್‍ಗೆ ಬೇಕಾಗಿಲ್ಲ . ಮನೆಯಿಲ್ಲದ, ಕೆಲಸವಿಲ್ಲದ ನಿರಾಶ್ರಿತರ ಪರ ದನಿ ಎತ್ತುವಂತಹ ಕೆಲಸವಾಗಬೇಕಿದ್ದು, ಇತರೆ ಧರ್ಮದವರನ್ನು ವಿರೋಧಿಸುವಂತಹ ಮನೋಭಾವ ಲೀಗ್ ಕಾರ್ಯಕರ್ತರಲ್ಲಿಲ್ಲ . ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಲೀಗ್ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಮುಸ್ಲಿಮರ ಅನ್ಯಾಯದ ಪರ ದನಿ ಎತ್ತುವ ಸಲುವಾಗಿ ಪಕ್ಷ ಸ್ಥಾಪನೆಯಾಗಿದೆ ಎಂದರು.
ಮಾಜಿ ಮೇಯರ್ ಅಶ್ರಫ್, ಮಂಜೇಶ್ವರ ತಾಲೂಕು ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್ , ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಸೈಫುಲ್ಲಾ ತಂಙಳ್, ಮರಿಯಾಶ್ರಮ ಶಾಲೆ ಮುಖ್ಯೊಪಾಧ್ಯಾಯಿನಿ ಸಿಸ್ಟರ್ ಮೇರಿ ಪಿಂಟೋ , ಮರಿಯಾಶ್ರಮ ಶಾಲಾ ಅಮೃತ ಮಹೋತ್ಸವ ಸಮಿತಿ ಕೋಶಾಧಿಕಾರಿ ಮಧುಸೂದನ ಆಚಾರ್ಯ, ಹಿದಾಯತ್ ಮಾರಿಪಳ್ಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬಿ.ಸಿ.ರೋಡ್, ಹುಸೈನ್ ತಲಪಾಡಿ, ಶಬೀರ್ ತಲಪಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಖ್ಯಾತ ಬರಹಗಾರ ಅಬ್ಬಾಸ್ ಖುರೇಷಿ ಸೇರಿದಂತೆ ಯೂಸುಫ್ ತಲಪಾಡಿ, ಖಮರುದ್ದೀನ್ ಖಾನ್ , ಶಮೀರ್ ಚಮ್ಮಿ ಸಹಿತ 20 ಮಂದಿಯ ತಂಡ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಾತೀಷ್ ಕೊಡ್ಲಿಪೇಟೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


