UN NETWORKS
ಉಳ್ಳಾಲ: ರಸ್ತೆ ಡಾಮರೀಕರಣಕ್ಕೆ ಅನುದಾನ ಒದಗಿಸಿದ ಸಚಿವ ಖಾದರ್ ಅವರಿಗೆ ಅಭಿನಂಧಿಸಿ ಹಾಕಲಾದ ಬ್ಯಾನರನ್ನು ಹರಿದ ಕಿಡಿಗೇಡಿಗಳಿಗೆ ದೇವರು ಒಳ್ಳೆಯ ಬುದ್ದಿ ಕೊಡುವಂತೆ ಕಾಂಗ್ರೆಸ್ ಕಾರ್ಯಕರ್ತರು ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಘಟನೆ ಕೊಲ್ಯ ಕನೀರುತೋಟದಲ್ಲಿ ನಡೆದಿದೆ.
ಕೊಲ್ಯ ಕನೀರುತೋಟ ಲೋಕಯ್ಯಪಾಲು ರಸ್ತೆಗೆ ಸಚಿವ ಯು.ಟಿ.ಖಾದರ್ ಅವರ 20 ಲಕ್ಷ ಅನುದಾನದಲ್ಲಿ ಡಾಮರೀಕರಣ ನಡೆಸಲಾಗಿತ್ತು. ಇದಕ್ಕೆ ಕೃತಜ್ಞತಾಪೂರ್ವಕವಾಗಿ ಅಭಿಮಾನಿಗಳು ಅಭಿನಂಧನೆ ಸಲ್ಲಿಸಿದ ಬ್ಯಾನರನ್ನು ಈ ಭಾಗದಲ್ಲಿ ಅಳವಡಿಸಿದ್ದರು. ಆದರೆ ಕಿಡಿಗೇಡಿಗಳು ಎರಡು ಬಾರಿ ಬ್ಯಾನರ್ ಹರಿದು ದುಷ್ಕøತ್ಯ ಎಸಗಿದ್ದಾರೆ ಎಂದು ಆರೋಪಿಸಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಬುಧವಾರ ಕೊಲ್ಯ ಕನೀರುತೋಟದ ಲೋಕಯ್ಯಪಾಲು ಬಳಿಯಿರುವ ಶ್ರೀ ನಾಗಬ್ರಹ್ಮ ಮಹಾಕಾಳಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಬ್ಯಾನರ್ ಹಾನಿಗೊಳಿಸಿದವರಿಗೆ ದೇವರು ಬುದ್ಧಿ ಕೊಡುವಂತೆ ಬೇಡಿಕೆ ಮುಂದಿರಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಮಾತನಾಡಿ ಕೊಲ್ಯ ಲೋಕಯ್ಯಪಾಲು ವಾಹನಗಳು ಬರಲು ಅಸಾಧ್ಯವಾದ ಸ್ಥಿತಿಯಿತ್ತು. ನಾಗರಿಕರು ಹಾಗೂ ಸ್ಥಳೀಯರ ಜತೆಗೆ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂಧಿಸಿ ರೂ. 20 ಲಕ್ಷ ಅನುದಾನವನ್ನು ಒದಗಿಸಿದ ಸಚಿವರಿಂದಾಗಿ ರಸ್ತೆ ಡಾಮರೀಕರಣ ನಡೆಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಕೃತಜ್ಞತಾಪೂರ್ವಕವಾಗಿ ನಾಗರಿಕರು ಸೇರಿ ಅಭಿನಂದನೆ ಸಲ್ಲಿಸುವ ಬ್ಯಾನರನ್ನು ಹಾಕಿದ್ದರು. ಮೊದಲನೇ ಬಾರಿ ಹಾಕಲಾದ ಬ್ಯಾನರನ್ನು ಹರಿದ ಕಾರಣಕ್ಕೆ ಮತ್ತೆ ನಾಲ್ಕು ಬಾರಿ ಬ್ಯಾನರನ್ನು ಹಾಕಿದರೂ ಅದನ್ನು ಕಿಡಿಗೇಡಿಗಳು ಹರಿಯುತ್ತಲೇ ಬಂದಿದ್ದಾರೆ. ಇದು ಖಂಡನೀಯ. ಅಭಿವೃದ್ಧಿ ಕೆಲಸಕ್ಕೆ ಪ್ರೋತ್ಸಾಹಿಸಿ, ಸಾಧ್ಯವಿಲ್ಲದಿದ್ದಲ್ಲಿ ಹಾಳು ಮಾಡದಿರಿ. ಮುಂದೆ ಇಂತಹ ದುಷ್ಕೃತ್ಯ ನಡೆಸದಂತೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ನಡೆಸಿದ್ದೇವೆ. ಎಳೆಯ ಹರೆಯದ ಯುವಕರು ಸೇರಿ ಬ್ಯಾನರ್ ಹರಿದಿರುವುದನ್ನು ಸಿಸಿಟಿವಿ ಮೂಲಕ ನೋಡಿದ್ದೇವೆ. ಕಿಡಿಗೇಡಿಗಳು ಯಾರು ಎಂಬುದು ಗೊತ್ತಿದೆ. ಆದರೆ ಅವರ ವಿರುದ್ಧ ದೂರು ದಾಖಲಿಸಿದಲ್ಲಿ ಮನೆಮಂದಿಗೆ ತೊಂದರೆಯಾಗುವುದು ಅನ್ನುವ ಉದ್ದೇಶದಿಂದ ಪ್ರಾರ್ಥಿಸಿದ್ದೇವೆ. 45 ದಿನಗಳ ಒಳಗೆ ಅವರಾಗಿಯೇ ಬಂದು ಕ್ಷೇತ್ರದಲ್ಲಿ ಕ್ಷಮೆಯಾಚಿಸಲಿ ಎಂದರು.
ಈ ವೇಳೆ ಮುಖಂಡರುಗಳಾದ ಸದಾಶಿವ ಉಳ್ಳಾಲ್, ಮುಸ್ತಾಫ ಹರೇಕಳ, ಸಲಿಂ ಮೇಘ, ಇಕ್ಬಾಲ್ ಸಾಮನಿಗೆ, ಸುರೇಶ್ ಭಟ್ನಗರ, ಬಾಝಿಲ್ ಡಿಸೋಜ, ಮುರಳೀಧರ್ , ಸುಕುಮಾರ್, ದೀಪಕ್ ಪುಜಾರಿ, ದಿನೇಶ್ ಕುಂಪಲ, ಸುರೇಖಾ ಚಂದ್ರಹಾಸ್, ವಿಲ್ಮಾ ಆಲ್ಫ್ರೆಡ್ ಡಿಸೋಜ, ಪದ್ಮಾವತಿ ಪೂಜಾರಿ, ಸುಹಾಸಿನಿ ಬಬ್ಬುಕಟ್ಟೆ, ಬಶೀರ್ ಕೊಳಂಗೆರೆ ಮುಂತಾದವರು ಉಪಸ್ಥಿತರಿದ್ದರು.


