UN NETWORKS
ಉಳ್ಳಾಲ: ಉತ್ಸಾಹ, ಜ್ಞಾನ, ಸಹಾನುಭೂತಿಯ ಜತೆಗೆ ಜನರೊಂದಿಗಿನ ಒಡನಾಟದ ಗುಣಗಳು ಬೆಳೆಸಿದಲ್ಲಿ ಪ್ರತಿಯೊಬ್ಬರು ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಕಣ್ಣು ದಾನಿಗಳ ಉಪಸಮಿತಿಯ ಸಂಚಾಲಕ ಹಾಗೂ ಕಣ್ಣಿನ ಬ್ಯಾಂಕ್ ಅಸೋಸಿಯೇಷನ್ ಸೌತ್ ಝೋನ್ ಇದರ ಮುಖ್ಯಸ್ಥ ಎಂ.ಕೆ.ಕೃಷ್ಣ ಹೇಳಿದರು.
ಅವರು ದೇರಳಕಟ್ಟೆ ಪಾನೀರಿನ ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಯ ಯುವ ರೆಡ್‍ಕ್ರಾಸ್ ಘಟಕದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾದ ಓರಿಯೆಂಟೇಷನ್ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜನರೊಂದಿಗೆ ಉತ್ಸಾಹ ಹಾಗೂ ಸಹನೆಯಿಂದ ಜ್ಞಾನ ಗಳಿಸಿದಂತಹ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮದರ್ ತೆರೆಸಾ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿ ದೇಶದ ರತ್ನ ಆಗಿರುವ ಸರ್ ಎಂ.ವಿಶ್ವೇಶ್ವರೈಯ್ಯ ಯಶಸ್ವಿ ಜೀವನ ನಡೆಸಿದವರು. ಅವರನ್ನೇ ಆದರ್ಶವನ್ನಾಗಿ ತೆಗೆದುಕೊಂಡು ದೇಶದ ಬಹುದೊಡ್ಡ ಯುವಸಮುದಾಯ ಜೀವನದಲ್ಲಿ ಸಾಧಿಸುವ ಛಲ ಹೊಂದಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವಿಜಯ್ ಪೈ ಮಾತನಾಡಿ ಕಣ್ಣು ದಾನದ ಕುರಿತ ಜಾಗೃತಿ ಕಾರ್ಯಕ್ರಮಗಳು ಅಗತ್ಯ ಆಗಬೇಕಿದೆ. ದೇಶದ ವೈದ್ಯಕೀಯ ಮಂಡಳಿ ಆದೇಶದಂತೆ ಪ್ರತಿಯೊಂದು ಆಸ್ಪತ್ರೆಯಲ್ಲಿಯೂ ಕಣ್ಣು ದಾನಿಗಳ ಸೆಂಟರ್ ತೆರೆಯಬೇಕಿದೆ. ಸಾಮಾಜಿಕ ಜಾಲತಾಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕವೂ ಕಣ್ಣು ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ ಕಾರ್ಯ ಅಗತ್ಯ ಆಗಬೇಕಿದೆ ಎಂದರು.
ನಿಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಾತಿಮಾ ಡಿಸಿಲ್ವ ಸ್ವಾಗತಿಸಿದರು. ಲತಾ.ಯಸ್ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲೆ ಸಬಿತಾ ನಾಯಕ್ ವಂದಿಸಿದರು.



