UN NETWORKS
ಮೋಂಟುಗೋಳಿ: ಹತ್ತು ದಿನಗಳಲ್ಲಿ ಸರಕಾರಿ ಬಸ್ಸು ಬಾರದೇ ಇದ್ದಲ್ಲಿ ಒಂದು ದಿನ ಮೋಂಟುಗೋಳಿ ನಾಟೆಕಲ್ ನಡುವಿನ ಬಸ್ ಬಂದ್ ನಡೆಸಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಾಗಿ ಡಿವೈಎಫ್ ಐಟಿ ಮೋಂಟುಗೋಳಿ ಘಟಕದ ಅಧ್ಯಕ್ಷ ರಝಾಕ್ ಮೊಂಟೆಪದವು ಎಚ್ಚರಿಸಿದ್ದಾರೆ.
ಮೋಂಟುಗೋಳಿ ಸಮೀಪ ಸರಕಾರಿ ಬಸ್ಸಿಗೆ ಒತ್ತಾಯಿಸಿ ಸೋಮವಾರ ಡಿವೈ ಎಫ್ ಐ ಆಯೋಜಿಸಿದ್ದ ಪ್ರತಿಬಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಆರ್ ಟಿ ಓ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂಧನೆಯಿಲ್ಲ. ಅಧಿಕಾರಿಗಳು ಬಸ್ಸು ಮಾಲೀಕರ ಸೂಟ್ ಕೇಸ್ ಪಡೆದುಕೊಂಡು ಬಸ್ಸು ಹಾಕಲು ಮುಂದಾಗುತ್ತಿಲ್ಲ. ಖಾಸಗಿ ಬಸ್ಸಿನಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸುತ್ತಾರೆ, ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗಿ ಬಿದ್ದು ಜೀವಹಾನಿಯಾಗುತ್ತಿದೆ. ಚಿಲ್ಲರೆ ನೆಪದಲ್ಲಿ ಗಲಾಟೆಗಿಳಿಯುವ ಬಸ್ಸು ಸಿಬ್ಬಂದಿ ವರ್ತನೆಯೂ ಸಹಿಸಲು ಅಸಾಧ್ಯ.
ಅಲ್ಲದೆ ಮದುವೆ ಟ್ರಿಪ್ ಗಳಿಗೆ ಬಸ್ಸುಗಳು ತೆರಳುವುದರಿಂದ ಜನ ಪರದಾಡಬೇಕಾದ ಸ್ಥಿತಿಯಿದೆ ಎಂದ ಅವರು 10 ದಿನಗಳಲ್ಲಿ ಬಸ್ಸು ಬಾರದೇ ಇದ್ದಲ್ಲಿ ಬಂದ್ ನಡೆಸಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ ಅಲ್ಪಸಂಖ್ಯಾತರ ಅಧ್ಯಕ್ಷನಿಂದಲೇ ಅಲ್ಪಸಂಖ್ಯಾತರಿಗೆ ವಂಚನೆ : ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಕಲ್ಯಾಣದ ಅಧ್ಯಕ್ಷ ಎನ್.ಎಸ್ ಕರೀಂ ಹೆಚ್ಚಾಗಿ ಅಲ್ಪಸಂಖ್ಯಾತರಿರುವ ಪ್ರದೇಶಗಳಿಗೆ ಸರಕಾರಿ ಬಸ್ಸುಗಳನ್ನು ಹಾಕದಂತೆ ಹೈಕೋರ್ಟಿನ ಮೊರೆ ಹೋಗಿ ತಡೆಯಾಜ್ಞೆ ತರುತ್ತಿದ್ದಾನೆ. ಇಂತಹವರಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಹೇಗೆ ಸಾಧ್ಯ. ಸಾರಿಗೆ ಇಲಾಖೆಯವರು ಹಮ್ಮಿಕೊಳ್ಳುವ ಸಾರ್ವಜನಿಕ ಸಭೆಯಲ್ಲೂ ಸಾರ್ವಜನಿಕರ ಪರವಾಗಿ ಮಾತನಾಡದ ಅಧ್ಯಕ್ಷ, ಬಸ್ಸು ಮಾಲೀಕನಾಗಿದ್ದುಕೊಂಡು, ಬಸ್ಸು ಮಾಲೀಕರ ಜತೆ ಸೇರಿಕೊಂಡು ಮೋಂಟುಗೋಳಿ ಭಾಗಕ್ಕೆ ಮಂಜೂರಾದ ಬಸ್ಸು ಸಹಿತ ಇತರೆಡೆ ಮಂಜೂರಾದ 18 ಬಸ್ಸುಗಳ ಪರವಾನಿಗೆ ಮೇಲೆ ತಡೆಯಾಜ್ಞೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭ ಜಯಂತ್ ಅಂಬ್ಲಮೊಗರು, ಇಬ್ರಾಹಿಂ ಮದಕ, ಸುನಿಲ್ ತೇವುಲ, ಹಂಝ ಕಿನ್ಯಾ, ಸ್ಥಳೀಯರಾದ ಬಾಬುಂಞ ಮುಂತಾದವರು ಉಪಸ್ಥಿತರಿದ್ದರು.














