UN NETWORKS
ತಲಪಾಡಿ: ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ 3.25 ಎಕರೆ ಜಮೀನು ಮೀಸಲಿಡಲಾಗಿತ್ತು. ಆದರೆ ಖಾಸಗಿಯವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂದು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಹೇಳಿದ್ದಾರೆ.
ಸ್ವಚ್ಛ ಭಾರತ್ ಮಿಷನ್‍ನಡಿ ತಲಪಾಡಿ ಗ್ರಾಮ ಪಂಚಾಯಿತಿಯಿಂದ ಶನಿವಾರ ಕೆ.ಸಿ.ನಗರ ಫಲಾಹ್ ಶಾಲೆಯಲ್ಲಿ ಶನಿವಾರ ನಡೆದ ಸ್ವಚ್ಛತಾ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು.
ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಜಮೀನು ಮೀಸಲಿಟ್ಟರೂ ತಡೆಯಾಜ್ಞೆಯಿಂದಾಗಿ ಅದು ಸಾಧ್ಯವಾಗಿಲ್ಲ. ಫಲಾಹ್ ಶಾಲೆ ಬಳಿ ಜನವಸತಿ ಇಲ್ಲದ ಕಾರಣ ರಸ್ತೆಬದಿ ಕಸ ಬೀಳುತ್ತಿದ್ದು, ತಿಂಗಳಿಗೆರೆಡು ಬಾರಿ ತೆಗೆಯಲಾಗುತ್ತಿದೆ. ಆದರೆ ಮನಪಾದಿಂದ ಸ್ವೀಕರಿಸದ ಕಾರಣ ಸಮಸ್ಯೆ ಬಂದಿದೆ. ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಅಂಗಡಿ, ಫ್ಲ್ಯಾಟುಗಳಿಗೆ ಮಾಹಿತಿ ನೀಡಿ ಸಂಬಂಧಪಟ್ಟವರು ಮನಸ್ಸು ಗೆಲ್ಲುತ್ತೇವೆ. ನಂತರವೂ ಬಗ್ಗದಿದ್ದರೆ ಕಾನೂನು ಕ್ರಮದ ಮುಖಾಂತರ ಬಗ್ಗಿಸುವ ಪ್ರಯತ್ನ ಮಾಡುತ್ತೇವೆ ಎಂದುತ್ತರಿಸಿದರು.
ಪ್ಲಾಸ್ಟಿಕ್ ಎನ್ನುವುದು ಕೊಡುಗೆಯೂ ಹೌದು, ಕುರ್ಚಿ, ಬಕೆಟ್ ಹೀಗೆ ವಿವಿಧ ರೀತಿಯಲ್ಲಿ ಪ್ಲಾಸ್ಟಿಕ್ ಮರುಬಳಕೆ ಮಾಡಲಾಗುತ್ತಿದೆ. ತೆಳುವಾದ ಪ್ಲಾಸ್ಟಿಕ್ ಈಗಾಗಲೇ ನಿಷೇಧಿತ ಎಂದು ಘೋಷಿಸಲ್ಪಟ್ಟಿದೆ. ಮನೆಯಲ್ಲಿ ಸ್ವಚ್ಛವಾಗಿ ಸಂಗ್ರಹಿಸಲಾದ ಪ್ಲಾಸ್ಟಿಕ್ ಪ್ರತಿ ತಿಂಗಳ 2ನೇ ಶನಿವಾರ ಅಂಗನವಾಡಿಗಳ ಮುಖಾಂತರ ಗ್ರಾ.ಪಂ.ಗೆ ನೀಡುವ ಬಗ್ಗೆ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಬರುವ ಆದಾಯದ ಶೇ.25 ಅಂಗನವಾಡಿಯ ಬಳಕೆಗೆ ನೀಡಲಾಗುವುದು ಎಂದು ಜಿಲ್ಲಾ ನೆರವು ಘಟಕದ ಪ್ರತಿನಿಧಿ ನವೀನ್ ಕೊಣಾಜೆ ತಿಳಿಸಿದರು.
ಬೆಂಗಳೂರಿನ ಗ್ರೀನ್ ಸ್ಪೇಸ್ ಸೊಲ್ಯೂಶನ್ ಪ್ರತಿನಿಧಿ ಇಸ್ಮಾಯಿಲ್ ಇರ್ಫಾನ್ ಮಾಹಿತಿ ನೀಡಿ, ಸದಸ್ಯರು ವಾರಕ್ಕೊಮ್ಮೆ ಪ್ರತೀ ಮನೆ, ಧಾರ್ಮಿಕ ಕೇಂದ್ರಗಳ ಮುಖಾಂತರ ಜನರಲ್ಲಿ ಒಣ ಕಸದ ಬಗ್ಗೆ ಮಾಹಿತಿ ನೀಡಲಿದೆ. ಅಂಗನವಾಡಿಗಳಲ್ಲಿ ದೃಶ್ಯ ಪ್ರಸಾರ ಮಾಡಲಾಗುವುದು ಎಂದರು.
ನರೇಗಾದ ಮಾಜಿ ಒಂಬುಡ್ಸ್‍ಮೆನ್ ಶೀನ ಶೆಟ್ಟಿ, ಪಿಡಿಓ ಕೇಶವ ಪೂಜಾರಿ ಪಾವೂರು ಮಾತನಾಡಿದರು. ಗ್ರಾಪಂ. ಉಪಾಧ್ಯಕ್ಷೆ ಜಯಲಕ್ಷ್ಮಿ ಪ್ರಮಾಣ ಬೋಧಿಸಿದರು. ಸದಸ್ಯ ಇಬ್ರಾಹಿಂ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಫಲಾಹ್ ಶಾಲೆಯ ಅಧ್ಯಕ್ಷ ಯು.ಬಿ.ಮಹಮ್ಮದ್, ಜಿ.ಪಂ. ಮಾಜಿ ಸದಸ್ಯ ವಿನಯ ನಾಯಕ್, ಜಯರಾಮ ಶೆಟ್ಟಿ ಕಡಮುಗೇರುಗುತ್ತು, ಸಮಾಜ ಸೇವಕ ಜಮಾಲುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಅಬ್ಬಾಸ್ ಉಚ್ಚಿಲ್ ಅವರನ್ನು ಗೌರವಿಸಲಾಯಿತು. ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಮೇಲಾಂಟ ಕಾರ್ಯಕ್ರಮ ನಿರ್ವಹಿಸಿದರು.








