UN NETWORKS
ತೊಕ್ಕೊಟ್ಟು: ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಾಗವನ್ನು ಮಾರಾಟ ಮಾಡಿ ಖಾಸಗಿಯವರಿಗೆ ನೀಡಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಕುಟುಂಬಕ್ಕೆ ಆಗಿರುವ ವಂಚನೆಗೆ ಕಂದಾಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘದ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಗಾಂಧಿನಗರದಲ್ಲಿ ಮಂಗಳವಾರ ದಲಿತ ಸಂಘಟನೆ ಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ತೊಕ್ಕೊಟ್ಟು ಕಾಪಿಕಾಡು ನಿವಾಸಿ ದಿ. ತೋಮರವರಿಗೆ ಮಂಜೂರಾಗಿರುವ ಸರಕಾರಿ ಜಮೀನಿನ ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿದ ಕಂದಾಯ ಅಧಿಕಾರಿಗಳ ಧೋರಣೆ ಹಾಗೂ ನ್ಯಾಯಾಲಯ ನೀಡಿದ ಆದೇಶವನ್ನು ಜಾರಿ ಮಾಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜನಸೇವೆಗೆಂದು ಇರುವ ಸರಕಾರಿ ಅಧಿಕಾರಿಗಳು ಜನವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಹಣ ಗಳಿಸುವ ಉದ್ದೇಶದಿಂದಲೇ ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಾಗವನ್ನು ಇಂದು ಕಬಳಿಸಲಾಗಿದೆ. ಬಂಗಲೆ ನಿರ್ಮಾಣದಲ್ಲಿ ನಿರತರಾಗಿರುವ ಅಧಿಕಾರಿಗಳ ವಿರುದ್ಧ ಜನರ ಪರ ದನಿ ಎತ್ತುತ್ತಿಲ್ಲ. ಜಿಲ್ಲೆಯಾದ್ಯಂತ ಎಕರೆಗಟ್ಟಲೆ ಸರಕಾರಿ ಭೂಮಿಯಿದ್ದರೂ ದಲಿತರಿಗೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದರ ಬಗ್ಗೆ ಚರ್ಚಿಸಲು ಮುಂದಾದರೂ ಜಿಲ್ಲಾಧಿಕಾರಿ ದಲಿತ ಮುಖಂಡರಲ್ಲಿ ಉಡಾಫೆಯಾಗಿ ವರ್ತಿಸಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಹೋರಾಟ ನಡೆಯದೇ ಇದ್ದಲ್ಲಿ ದಬ್ಬಾಳಿಕೆಗಳು ಮುಂದುವರಿಯುತ್ತಲೇ ಇರುತ್ತದೆ. ದಲಿತ ವಿರೋಧಿ ಜಿಲ್ಲಾಧಿಕಾರಿ ವಿರುದ್ಧ ಆ.28 ರಂದು ಬೃಹತ್ ಹೋರಾಟ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯ ದಲಿತ ಸಂಘದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಮಾತನಾಡಿ ದಲಿತ ಅಧಿಕಾರಿಗಳೇ ದಲಿತರ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಉಚ್ಛನ್ಯಾಯಾಲಯದಿಂದ ಬಂದ ನಿರ್ದೇಶನದಂತೆ ಸಹಾಯಕ ಕಮೀಷನರ್ ಅವರಿಗೆ 2007ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ 5 ವರ್ಷಗಳವರೆಗೆ ಅರ್ಜಿ ವಿಚಾರಣೆ ನಡೆಸಿ 2007ರಲ್ಲಿ ಮೂಲ ದಾಖಲೆಗಳು ಇಲ್ಲವೆಂಬ ಕಾರಣವನ್ನು ನೀಡಿತ್ತು. ಆದರೂ ಪಟ್ಟು ಬಿಡದೆ ದಲಿತ ಸಮುದಾಯದ ತಹಶೀಲ್ದಾರ್ ಅವರಲ್ಲಿ ಕೇಳಿಕೊಂಡರೂ ದಾಖಲೆಗಳಿಲ್ಲವೆಂಬ ಪ್ರತ್ಯುತ್ತರ ದೊರಕಿದೆ. ಬಳಿಕ ಇನ್ನಷ್ಟು ವಿಚಾರಿಸಿದ ಹಿನ್ನೆಲೆಯಲ್ಲಿ ಪಿಟಿಸಿಎಲ್ ಕೇಸ್ ವರ್ಕರ್ ಅವರು ದಾಖಲೆಗಳಿವೆ ಎಂಬ ಆದೇಶವನ್ನು ತಹಶೀಲ್ದಾರ್ ಮೂಲಕ ನೀಡಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಯು.ಕೆ.ಗಿರೀಶ್ ಕುಮಾರ್, ದಲಿತ ದಮನಿತ ಹೋರಾಟ ಸಮಿತಿ ಜಿಲ್ಲಾ ಪದಾಧಿಕಾರಿ ರಘುವೀರ ಸೂಟರ್ಪೇಟೆ, ಜಿಲ್ಲಾ ಜನಶಕ್ತಿ ಜನಪರ ಹೋರಾಟಗಾರ ಸಂಚಾಲಕ ಜಿನ್ನಪ್ಪ ಬಂಗೇರ, ದಲಿತತಾ ಸೇವಾ ಸಮಿತಿ ಜಿಲ್ಲಾ ಂಚಾಲಕ ಸೇಸಪ್ಪ ಬೈದಕಾಡು, ಉಜನು ಆಲಡ್ಕ, ಬಾಲಕೃಷ್ಣ ಸುಳ್ಯ, ಬಂಟ್ವಾಳ ಪ್ರಜಾ ಪರಿವರ್ತನಾ ವೇದಿಕೆಯ ಕೃಷ್ಣಪ್ಪ ಪ್ರದ್ದೋಟು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪ್ರಕಾಶ್ ಉಳ್ಳಾಲ್, ಜಯರಾಜ್ ಉಳ್ಳಾಲ್, ಸಂದೇಶ್ ಅಂಚನ್, ಗಣೇಶ್ ಕೆ ಭಾಗವಹಿಸಿದ್ದರು.
ಸಲ್ಲಿಸಿದ ಮನವಿ :
ಉಳ್ಳಾಲ ಗ್ರಾಮದ ಕಾಪಿಕಾಡುವಿನಲ್ಲಿರುವ ಸರ್ವೆ ನಂಬ್ರ 181-29 ರಲ್ಲಿ 0.22 ಎಕ್ರೆ ಜಮೀನು ಡಿ.ಆರ್ ನಂಬ್ರ : 245/39 ರಂತೆ ದಿ| ತೋಮ ಎಂಬವರಿಗೆ ಮಂಜೂರಾಗಿದೆ. ಆದರೆ ವಾರೀಸುದಾರರಿಗೆ ಗೊತ್ತಿಲ್ಲದಂತೆ ಜಗನ್ನಾಥ ಜೋಯಿಸ ಎಂಬವರಿಗೆ ಕಾನೂನು ಬಾಹಿರವಾಗಿ ಪರಬಾರೆಯಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್ ಕಾಯ್ದೆ ಉಲ್ಲಂಘನೆ ಆಗಿರುವ ಬಗ್ಗೆ ದೂರು ದಾಖಲು ಮಾಡಿದ ಹಿನ್ನೆಲೆಯಲ್ಲಿ 1997ರ ಜು.8 ರಂದು ತೆರೆದ ನ್ಯಾಯಾಲಯದಲ್ಲಿ ಪರಬಾರೆಯನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಸದ್ಯ ಜಮೀನಿನ ಮೂಲ ಮಂಜೂರಾತಿ ಕಡತ ಪ್ರತಿ ಲಭ್ಯವಿಲ್ಲದಿದ್ದರೂ ಸಹಾಯಕ ಆಯುಕ್ತರ ನ್ಯಾಯಾಲಯ ಇತರ ಪೂರಕ ದಾಖಲೆ, ಹೇಳಿಕೆ, ವಾದ ವಿವಾದಗಳನ್ನು ಆಧರಿಸಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯ ಮುಂದಿನ ನಿರ್ಧಾರವನ್ನು ಸಹಾಯಕ ಆಯುಕ್ತರಿಗೆ ನೀಡಿದೆ. ಅವರು ಆದೇಶವನ್ನು ಜಾರಿ ಮಾಡುವ ಮೂಲಕ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.














