ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತಲಪಾಡಿ: ಕಾರು ಚಾಲಕನಿಗೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ಕರ್ನಾಟಕ-ಕೇರಳ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್‍ಬೂತ್‍ನಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿ ಇಬ್ಬರು ಟೋಲ್ ಸಿಬ್ಬಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತಲಪಾಡಿ ನಾರ್ಲಪಡೀಲು ನಿವಾಸಿ ಅನ್ಸಾರ್ ( 28) ಹಲ್ಲೆಗೊಳಗಾದವರು. ಹಲ್ಲೆಗೆ ಸಂಬಂಧಿಸಿ ತಲಪಾಡಿ ಟೋಲ್ ಸಿಬ್ಬಂದಿಗಳಾದ ದೀಕ್ಷಿತ್ (28) ಮತ್ತು ಕೌಶಿಕ್ (21) ಎಂಬವರನ್ನು ಕೊಲೆಯತ್ನ ಪ್ರಕರಣ ದಾಖಲಿಸಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಮಂಗಳೂರಿನಿಂದ ಝೈಲೋ ವಾಹನದಲ್ಲಿ ತಲಪಾಡಿ ಕಡೆಗೆ ಅನ್ಸಾರ್ ಹಾಗೂ ನಾಲ್ವರ ತಂಡ ಬಂದಿತ್ತು. ಟೋಲ್‍ಬೂತ್‍ನಲ್ಲಿ ಸುಂಕ ಕೇಳಿದಾಗ ಕಾರಿನಲ್ಲಿದ್ದವರು ತಾವು ಸ್ಥಳೀಯರೆಂದು ತಿಳಿಸಿದ್ದರು. ಆದರೆ ಕಾರು ಮಹಾರಾಷ್ಟ್ರ ನೋಂದಾಯಿಸಿಕೊಂಡಿದ್ದ ವಾಹನವಾಗಿದ್ದರಿಂದಾಗಿ ಟೋಲ್ ಸಿಬ್ಬಂದಿ ಗುರುತಿನ ಚೀಟಿ ಅಥವಾ ವಾಹನದ ದಾಖಲೆ ಪತ್ರಗಳನ್ನು ನೀಡುವಂತೆ ತಿಳಿಸಿದ್ದರು. ಆದರೆ ಕಾರಿನಲ್ಲಿದ್ದವರು ದಾಖಲೆ ಪತ್ರಗಳನ್ನು ನೀಡದೆ ವಾಗ್ವಾದಕ್ಕೆ ಇಳಿದಿದ್ದರು.
ಆ ಬಳಿಕ ಟೋಲ್ ಸಿಬ್ಬಂದಿ ಹಾಗೂ ಕಾರಿನಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಇತ್ತಂಡಗಳ ಮಧ್ಯೆ ಹೊೈಕೈ ನಡೆದಿದ್ದು, ಟೋಲ್ ಸಿಬ್ಬಂದಿ ದೀಕ್ಷಿತ್ ಅನ್ಸಾರ್ ಮೇಲೆ ಹಲ್ಲೆ ನಡೆಸಿದಾಗ, ಕೈಯಲ್ಲಿದ್ದ ಬಳೆ ಖಾರು ಚಾಲಕ ಅನ್ಸಾರ್ ಮುಖಕ್ಕೆ ಬಡಿದು, ರಕ್ತದ ಗಾಯವಾಗಿದೆ. ಕೂಡಲೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಉಳ್ಳಾಲ ಪೊಲೀಸರು ಟೋಲ್ ಸಿಬ್ಬಂದಿ ಈರ್ವರನ್ನು ಬಂಧಿಸಿ, ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.


