ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ಜನರಿಗೆ ಮೌಲ್ಯಯುತವಾದ ಜ್ಞಾನ, ಮಾಹಿತಿ ಸಂಪನ್ಮೂಲವನ್ನು ಒದಗಿಸುವ ಮೂಲಕ ಅವರನ್ನು ತೃಪ್ತಿಪಡಿಸುವ ಕೆಲಸವನ್ನು ಗ್ರಂಥಾಲಯಗಳು ಮಾಡುತ್ತಿವೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಗ್ರಂಥಾಲಯವು ಹಲವಾರು ಆಧುನಿಕ ಸೌಲಭ್ಯಗಳೊಂದಿಗೆ ಜನರ ಮೂಲಭೂತ ಬೇಡಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ಗ್ರಂಥಾಲಯಗಳು ಮತ್ತು ಸಾರ್ವಜನಿಕರ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಿ ಹೆಚ್ಚೆಚ್ಚು ಜನರು ಇದರ ಬಳಕೆ ಮಾಡುವಂತಹ ಕೆಲಸ ಹಾಗೂ ಮಾಹಿತಿ ವಿಜ್ಞಾನದ ಮಹತ್ವವನ್ನು ತಿಳಿಯಪಡಿಸುವ ಕಾರ್ಯವು ಇಂತಹ ವಿಚಾರ ಸಂಕಿರಣಗಳಿಂದ ಆಗಬೇಕಾಗಿದೆ ಎಂದು ಗುಜರಾತ್ ಸೆಂಟ್ರಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೈಬ್ರೆರಿ ಮತ್ತು ಇನ್‍ಫಾರ್ಮೇಶನ್ ಸೈಯನ್ಸ್‍ನ ಡೀನ್ ಪ್ರೊ. ಮುತ್ತಯ್ಯ ಕೊಗನುರಾಮತ್ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿ ಮಂಗಳಾ ಸಭಾಂಗಣದಲ್ಲಿ `ಪ್ರೋಫೆಶನಲಿಸಂ ಇನ್ ಲೈಬ್ರೆರಿ ಆಂಡ್ ಇನ್‍ಫಾರ್ಮೇಶನ್ ಸರ್ವಿಸಸ್ ಫಾರ್ ಯೂಸರ್ ಎಂಪವರ್‍ಮೆಂಟ್: ಅಪೋರ್ಚುನಿಟಿಸ್ ಆಂಡ್ ಚಾಲೆಂಜಸ್’ ಎಂಬ ವಿಷಯದಲ್ಲಿ ರಾಷ್ಟ್ರಮಟ್ಟದ ಎರಡು ದಿನಗಳ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು, ಇಂಜಿನಿಯರ್ ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಾಗೂ ಜನಸಾಮಾನ್ಯರಿಗೆ ಗ್ರಂಥಾಲಯವು ಆಕರಗಳನ್ನು ಒದಗಿಸಿಕೊಡಬಲ್ಲ ಕೇಂದ್ರವಾಗಿದೆ. ಕರಾವಳಿಯ ಜನ ಓದುವುದರಲ್ಲಿ ಹಾಗೂ ಗ್ರಂಥಾಲಯದ ಮೂಲಕ ಮಾಹಿತಿ ಸಂಗ್ರಹಿಸುವುದರಲ್ಲಿ ಬಹಳಷ್ಟು ಮುಂದಿದ್ದಾರೆ. ಇಂತಹ ವಿಚಾರಸಂಕಿರಣಗಳು ಗ್ರಂಥಾಲಯ ಹಾಗೂ ಗ್ರಂಥಾಲಯ ಮಾಹಿತಿ ವಿಜ್ಞಾನದ ಅಗತ್ಯತೆ, ಸವಾಲುಗಳ ಬಗ್ಗೆ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಈಶ್ವರ್ ಭಟ್ ಅವರು, ನಾವು ಉದ್ದೇಶಿತ ಯಾವುದೇ ಗುರಿಯು ಈಡೇರಬೇಕಾದರೆ ಪರಿಶ್ರಮ, ಸಾಧನೆ ಅತ್ಯಗತ್ಯ. ಇಂದಿನ ಕಾಲಘಟ್ಟದಲ್ಲಿ ಕಂಪ್ಯೂಟರ್ ತಂತ್ರಜ್ಞಾನಗಳು ಬಂದು ಜನರು ಹೆಚ್ಚು ಪರಿಶ್ರಮ ವಹಿಸದೆ ಅಂತರ್ಜಾಲ ಮುಂತಾದವುಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಸುಮ್ಮನಿರುತ್ತೇವೆ. ಆದರೆ ಮಾಹಿತಿ ಜ್ಞಾನವನ್ನು ಪೂರೈಕೆ ಮಾಡುವಲ್ಲಿ ಗ್ರಂಥಾಲಯದ ಪಾತ್ರವು ಪ್ರಮುಖವಾದದ್ದು. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಸವಾಲುಗಳ ಬಗ್ಗೆ ಈ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅವರು, `ಕಾನ್ಫರೆನ್ಸ್ ಪ್ರೊಸೀಡಿಂಗ್ಸ್’ನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಖೈಸರ್ ಖಾನ್, ಸಮ್ಮೇಳನದ ಸಹ ಸಂಯೋಜಕ ಡಾ.ಟಿ.ವೈ.ಮಲ್ಲಯ್ಯ, ಗೋವಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊ.ಗೋಪಕುಮಾರ್ ಉಪಸ್ಥಿತರಿದ್ದರು.
ಸಂಶೋಧನಾ ವಿದ್ಯಾರ್ಥಿನಿ ಅರುಣಿಮಾ ಕಾರ್ಯಕ್ರಮ ನಿರೂಪಿಸಿದರು.



