ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ರಾಜ್ಯದ ಕಲೆಯಾಗಿರುವ ಯಕ್ಷಗಾನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾನಮಾನ ನೀಡುತ್ತಿದ್ದು, ಇದರ ಜತೆಗೆ ಯಕ್ಷಗಾನದ ಕುರಿತ ನೂತನ ಪದವಿ ಕೋರ್ಸನ್ನು ಸ್ಥಾಪಿಸಿ ಹೆಚ್ಚಿನ ಕಲಾವಿದರನ್ನು ಸೃಷ್ಟಿಸಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಸೋಮವಾರ ಯಕ್ಷಗಾನ ಕ್ಷೇತ್ರದ ದಿಗ್ಗಜರೆನಿಸಿಕೊಂಡ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥದಾರಿ, ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಹಾಗೂ ಯಕ್ಷಗಾನ ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಅವರಿಗೆ ಯಕ್ಷಮಂಗಳ ಪ್ರಶಸ್ತಿ ಮತ್ತು ಡಾ.ವಸಂತ ಭಾರದ್ವಾಜ ಅವರ `ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದರು.
ಸರಕಾರಗಳಿಂದ ನಿರೀಕ್ಷಿತ ಅಭಿವೃದ್ಧಿ ಕಲಾ ಕ್ಷೇತ್ರಕ್ಕೆ ಸಿಗುತ್ತಿಲ್ಲ. ಕ್ರೀಡಾ ಕ್ಷೇತ್ರವೂ ಅದೇ ರೀತಿಯಲ್ಲಿ ಮುಂದುವರಿದಿದೆ. ಆದರೂ ಜನ ವೈಯಕ್ತಿಕವಾಗಿ ಶ್ರಮಿಸಿ ಕಲೆ ಹಾಗೂ ಕ್ರೀಡೆ ಕ್ಷೇತ್ರಗಳಿಗೆ ಪ್ರೋತ್ಸಾಹಿಸಿ, ಕಲಾವಿದರಿಗೆ ಸಾಧನೆಯ ಹಾದಿಯನ್ನು ತೋರಿಸುತ್ತಾ ಮುಂದುವರಿದಿದ್ದಾರೆ. ಭರತನಾಟ್ಯ, ಶಾಸ್ತ್ರೀಯ ಸಂಗೀತಕ್ಕೆ ಪದವಿ ಕೋರ್ಸುಗಳು ಇರುವಂತೆ ರಾಜ್ಯದ ಕಲೆಯಾದ ಯಕ್ಷಗಾನಕ್ಕೂ ಪ್ರತ್ಯೇಕ ಪದವಿ ಕೋರ್ಸನ್ನು ಮಂಗಳೂರು ವಿಶ್ವವಿದ್ಯಾನಿಯದಲ್ಲಿ ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ. ಈ ಮೂಲಕ ಹಿಮ್ಮೇಳ ಹಾಗೂ ಮುಮ್ಮೇಳಕ್ಕೆ ಹೆಚ್ಚಿನ ಕಲಾವಿದರನ್ನು ಸಮಾಜಕ್ಕೆ ನೀಡಬೇಕಾದ ಕೆಲಸ ಮಂಗಳೂರು ವಿ.ವಿಯಿಂದ ಆಗಬೇಕಿದೆ. ಒಂದು ಹಂತದಲ್ಲಿ ಮಂಗಳೂರು ವಿ.ವಿ ಕೋರ್ಸನ್ನು ಸ್ಥಾಪಿಸಿದೇ ಆದಲ್ಲಿ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮವಾಗಿ ಆರಂಭಿಸುವ ಭರವಸೆಯನ್ನು ನೀಡಿದರು. ಸರಕಾರದಿಂದ ನಡೆಯುವ ಬಜೆಟ್ ಜನರನ್ನು ಮರಳುಗೊಳಿಸಲಷ್ಟೇ ಸೀಮಿತವಾಗಿದೆ. ಕ್ರೀಡೆ, ಕಲಾ ಕ್ಷೇತ್ರಕ್ಕೆ ಬಜೆಟಿನಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿಲ್ಲ. ಆದರೆ ಜನ ಕಲೆಯನ್ನು ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಬೇಕಿದೆ. ಕಲೆಯ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡು ಅದನ್ನು ಪೋಷಿಸುವ ಕಾಯಕದಲ್ಲಿ ಮುಂದುವರಿಯಬೇಕಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಕೆ.ಚಿನ್ನಪ್ಪ ಗೌಡ ಮಾತನಾಡಿ ಯಕ್ಷಗಾನವನ್ನು ದೇಶದ ಕಲೆಯನ್ನಾಗಿ ಪರಿಗಣಿಸಬೇಕಿದೆ. ವಾರ್ಷಿಕವಾಗಿ ಕೋಟ್ಯಂತರ ರೂ.ಗಳ ವ್ಯವಹಾರ ಯಕ್ಷಗಾನ ಕಲೆಯಿಂದ ನಡೆಯುತ್ತಿದ್ದರೂ, ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಹಿಂದೆ ಮನೆಯೊಳಗಿದ್ದ ಕಲೆ, ಇದೀಗ ದೇಶವ್ಯಾಪಿ ಮೆಚ್ಚುಗೆಯನ್ನು ಗಳಿಸಿದೆ. ಇದನ್ನು ಬೆಳೆಸಿದ ಕಲಾವಿದರ ಸ್ಮರಿಸುವ ಕಾರ್ಯ ಮಹತ್ತರವಾಗಿದ್ದು, ಈ ಮೂಲಕ ಅಧ್ಯಯನ ಕೇಂದ್ರ ಸ್ಥಾಪನೆಯ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯ ಶ್ಲಾಘನಾರ್ಹ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೊಣಾಜೆ ವಂದಿಸಿದರು.
` ಯಕ್ಷಗಾನದ ವೈಭವೀಕರಣ ವಿಷಾಧಕರ ‘
ಮಂಗಳೂರು ವಿವಿಯಲ್ಲಿ ನೀಡುವ ಯಕ್ಷ ಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಪ್ರತಿ ವರ್ಷ ಯಕ್ಷಗಾನ ಕೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕೆಲಸ ಶ್ಲಾಘನೀಯ. ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಸುತ್ತ ಕಾಲಘಟ್ಟದಲ್ಲಿ ಯಕ್ಷಗಾನ ವೈಭವಿಕರಣಗೊಳ್ಳುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಯಕ್ಷಗಾನದಲ್ಲಿ ಬೆಳಕು ಜ್ಞಾನ ಎಂಬ ಮಾತಿದೆ. ಯಾವುದೇ ಕಲೆಯಲ್ಲಿ ವೈವಿಧ್ಯತೆ ಹಾಗೂ ಅದರ ಬಗ್ಗೆ ಪ್ರಯೋಗಗಳು ಬೇಕು. ಆದರೆ ಯಾವುದೇ ಕಾರಣಕ್ಕೂ ಅದರ ಸಾಹಿತ್ಯ ಹಾಗೂ ಕುಣಿತದಲ್ಲಿ ಬದಲಾವಣೆಗಳಾಗಬಾರದು. ಸಾಂಪ್ರದಾಯಿಕ ಕಲೆಯಲ್ಲಿ ಅನಾವಶ್ಯಕವಾದ ಯಾವುದನ್ನು ಒಳಗೆ ಬರುವ ಕೆಲಸ ಮಾಡಬಾರದು ಎಂದ ಅವರು ಯಕ್ಷಗಾನ ಸಮಾರಂಭಗಳಲ್ಲಿ ವ್ಯಕ್ತಿಯನ್ನು ಗೌರವಿಸಲು ಯಕ್ಷಗಾನದ ನೃತ್ಯವನ್ನು ಅಥವಾ ಛಂಧಸ್ಸನ್ನು ಉಪಯೋಗಿಸಬಾರದು.
ಡಾ.ಎಂ.ಪ್ರಭಾಕರ ಜೋಶಿ
-ತಾಳಮದ್ದಳೆ ಅರ್ಥದಾರಿ ಹಾಗೂ ಸಂಶೋಧಕ
ಯಕ್ಷಗಾನ ಗಾನ-ವೈಭವ:
ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮೊದಲು ವೇದಿಕೆಯಲ್ಲಿ ಪುಂಡಿಕಾೈ ಗೋಪಾಲಕೃಷ್ಣ ಭಟ್ ಮತ್ತು ಪ್ರದೀಪ್ ಕುಮಾರ್ ಗಟ್ಟಿಯವರ ಭಾಗವತಿಕೆಯಲ್ಲಿ ಹಾಗೂ ದಯಾನಂದ ಮಿಜಾರು ಮತ್ತು ಸುಧಾಸ್ ಕಾವೂರು ಇವರ ಚೆಂಡೆ-ಮದ್ದಳೆಯಲ್ಲಿ ಯಕ್ಷಗಾನ ಗಾನ-ವೈಭವವು ನಡೆಯಿತು.





