ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕುಡಿಯುವ ನೀರಿನ ಯೋಜನೆಯನ್ನು ಸಮಗ್ರವಾಗಿ ಗ್ರಾಮಸ್ಥರಿಗೆ ಒದಗಿಸಬೇಕೆನ್ನುವ ಉದ್ದೇಶದಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬಾವಿ ನಿರ್ಮಿಸಲಾಗಿದ್ದು, ಇದರ ಅನುಷ್ಠಾನ ಗ್ರಾಮಸ್ಥರ ಸಹಕಾರದಿಂದ ಸಾಧ್ಯವಾಗಿದೆ ಎಂದು ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಹೇಳಿದ್ದಾರೆ.
ಹಿಂದೆ ಮಾಧವಪುರ, ಮೇಗಿನ ಪಂಜಾಳದಲ್ಲಿ ಗ್ರಾಮಸ್ಥರು ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನೀರಿಲ್ಲದೆ ಗ್ರಾಮದಿಂದ ಗುಳೆ ಹೋಗುವ ಸ್ಥಿತಿ ಇತ್ತು. ಇವೆಲ್ಲಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 5 ಲಕ್ಷ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದ 14ನೇ ಹಣಕಾಸು ಯೋಜನೆಯಡಿ ಮಂಜೂರಾದ ರೂ. 2 ಲಕ್ಷ ಅನುದಾನವನ್ನು ಪಂಚಾಯತ್ ವತಿಯಿಂದ ಭರಿಸಿ ಸ್ಥಳದಾನಿಯ ಸಹಕಾರದಿಂದ ಬಾವಿಯನ್ನು ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭ ತಲಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ , ಪಂಚಾಯಿತಿ ಸದಸ್ಯರುಗಳಾದ ಜಯಂತಿ ಪಕಳ, ಫಯಾಝ್ ಪಿಲಿಕೂರು, ಚಂದ್ರಹಾಸ್ ದೇವಿನಗರ, ಇಬ್ರಾಹಿಂ ತಲಪಾಡಿ, ಹಾಗೂ ಸ್ಥಳೀಯ ಕುಡಿಯುವ ನೀರಿನ ಸಮಿತಿಯ ಗೌರವಾಧ್ಯಕ್ಷ ಇಸಾಕ್ ತಲಪಾಡಿ , ಯಹ್ಯಾ, ಸ್ಥಳದಾನಿ ಗಣೇಶ್ ಕಿಲ್ಲೆ, ನಾರಾಯಣ ಕಿಲ್ಲೆ, ಖಾಸಿಂ, ನಿಯಾಝ್, ನಝೀರ್ ಮೊದಲಾದವರು ಉಪಸ್ಥಿತರಿದ್ದರು
-ಎಪ್ರಿಲ್, ಮೇ ತಿಂಗಳಲ್ಲಿ ನೀರಿಲ್ಲದೆ ಮೇಗಿನಪಂಜಾಳದ ಜನ ತತ್ತರಿಸುತ್ತಿದ್ದರು. ಅಲ್ಲದೆ ರಸ್ತೆ, ದಾರಿದೀಪದ ವ್ಯವಸ್ಥೆಯೂ ಇರಲಿಲ್ಲ. ಈ ಬಗ್ಗೆ ತಲಪಾಡಿ ಪಂಚಾಯಿತಿ ಚುನಾವಣೆ ವೇಳೆ ಆಶ್ವಾಸನೆ ನೀಡಿದಂತಹ ಭರವಸೆಯನ್ನು ಅಧ್ಯಕ್ಷರು ಈಡೇರಿಸಿದ್ದಾರೆ. ದಾರಿ, ದಾರಿದೀಪದ ವ್ಯವಸ್ಥೆಯ ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಆಗಿರುವುದು ಭಾಗದ ಜನರಿಗೆ ಸಂತಸ ತಂದಿದೆ.
ಯಹ್ಯಾ
ಸ್ಥಳೀಯರು
-ಗ್ರಾಮದಲ್ಲಿ ನೀರಿನ ಅಭಾವ ಬಹಳಷ್ಟಿದೆ. ಪಂಚಾಯಿತಿಗೆ ಬರುವ ಅನುದಾನವನ್ನು ಸರಿಯಾಗಿ ವಿನಿಯೋಗಿಸಿ , ಸಭೆಯಲ್ಲಿ ಕೈಗೊಳ್ಳುವ ನಿರ್ಣಯದಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆ ಜನರ ಸಹಕಾರದಿಂದ ಯಶಸ್ವಿಯಾಗಿದೆ. ಜನ ಪಂಚಾಯಿತಿಯನ್ನು ವಿಶ್ವಾಸಕ್ಕೆ ಪಡೆದುಕೊಂಡಲ್ಲಿ ಬಹುತೇಕ ಸಮಸ್ಯೆಗಳನ್ನು ಈಡೇರಿಸಲು ಸಾಧ್ಯವಾಗುವುದು
ಕೃಷ್ಣ ನಾಯಕ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ













