ಉಳ್ಳಾಲ ನ್ಯೂಸ್ ನೆಟ್ ವರ್ಕ್
ಸಮಾಜಕ್ಕೆ ಅಂಟಿಕೊಂಡಿರುವ ಅನೇಕ ಸಾಮಾಜಿಕ ಪಿಡುಗುಗಳ ಪೈಕಿ ಬಾಲ್ಯ ವಿವಾಹ ಕೂಡ ಒಂದು. ಬಾಲ್ಯ ವಿವಾಹ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಧರ್ಮ, ಪಂಗಡಗಳಲ್ಲೂ ನಡೆಯುತ್ತಿರುವುದನ್ನು ಕಾಣುತ್ತೇವೆ. ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಯಿಂದ ಸಣ್ಣವಯಸ್ಸಿನ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಚಿಕ್ಕ ಪ್ರಾಯದಲ್ಲೇ ಗರ್ಭಧಾರಣೆಯ ಅಪಾಯವನ್ನು ಎದುರಿಸುತ್ತಾರೆ ಮತ್ತು ನಿರಂತರ ಲೈಂಗಿಕ ಮತ್ತು ದೈಹಿಕ ಶೋಷಣೆಗೆ ತುತ್ತಾಗುತ್ತಾರೆ.
ಬಾಲ್ಯವಿವಾಹ ಅಂದರೇನು?:
21 ವರ್ಷ ತುಂಬದ ಹುಡುಗ ಮತ್ತು 18 ವರ್ಷ ತುಂಬದ ಹುಡುಗಿಯನ್ನು ಬಾಲಕ/ಬಾಲಕಿ ಎಂದು ಪರಿಗಣಿಸಲಾಗುತ್ತದೆ.
ವಿವಾಹವಾಗಲು ನಿಗದಿ ಪಡಿಸಿರುವ ಅರ್ಹ ವಯಸ್ಸು ಹುಡುಗನಿಗೆ 21 ವರ್ಷಗಳು ಮತ್ತು ಹುಡುಗಿಗೆ 18 ವರ್ಷಗಳು. ಆದ್ದರಿಂದ ವಿವಾಹವಾಗುವ ಗಂಡು/ಹೆಣ್ಣಿನಲ್ಲಿ ಯಾರಾದರೊಬ್ಬರು ನಿಗದಿಪಡಿಸಿದ ವಯಸ್ಸನ್ನು ಪೂರ್ಣಗೊಳಿಸದಿದ್ದರೆ ಅದು ಬಾಲ್ಯ ವಿವಾಹ ಎಂದು ಕರೆಯಲ್ಪಡುತ್ತದೆ.
ಸಣ್ಣ ವಯಸ್ಸಿನಲ್ಲೇ ಸಂಸಾರದ ಹೊಣೆ:
ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯಲ್ಲಿ ಹೆತ್ತವರು ತಮ್ಮ ಹದಿಹರೆಯದ ಹೆಣ್ಣನ್ನು ಮದುವೆ ಮಾಡಿಕೊಡುವ ಮೂಲಕ ಸಣ್ಣ ವಯಸ್ಸಿನಲ್ಲಿಯೇ ಆಕೆಯ ಮೇಲೆ ಸಂಸಾರದ ಭಾರವನ್ನು ಹೊರಿಸಿಬಿಡುತ್ತಾರೆ. ಆಕೆ ಆಟವಾಡಿಕೊಂಡಿರಬೇಕಾದ ವಯಸ್ಸಿನಲ್ಲಿ ಗಂಡ, ಮನೆ, ಮಕ್ಕಳು ಎಂದು ಸಂಸಾರದ ಹೊಣೆಯನ್ನು ಹೊರುತ್ತಾಳೆ. ವಯಸ್ಸು ತುಂಬುವುದರ ಒಳಗೆ ಮದುವೆಯಾಗಿವ ಹೆಣ್ಣುಮಗಳು ತನ್ನ ತಂದೆ-ತಾಯಿಯ ಪ್ರೀತಿಯಿಂದ ವಂಚಿತಳಾಗಿ ಗಂಡನ ಮನೆಯನ್ನು ಸೇರುತ್ತಾಳೆ.
ಮಾನಸಿಕ ನೋವು:
ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಬಾಲಕಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಿಂಸೆ ಪಡುತ್ತಾಳೆ. ಅಷ್ಟೇ ಅಲ್ಲದೆ ಅವಳನ್ನು ಸಣ್ಣಪ್ರಾಯದಲ್ಲೇ ಲೈಂಗಿಕ ಕ್ರಿಯೆಯಲ್ಲಿ ಬಳಸಿಕೊಳ್ಳುವುದರಿಂದ ಬಹುಬೇಗನೆ ಮಕ್ಕಳಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಅಷ್ಟೇ ಅಲ್ಲದೆ ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೈಹಿಕವಾಗಿ ಬಲಹೊಂದಿಲ್ಲದೆ ಇರುವುದರಿಂದ ತಾಯಿ ಮತ್ತು ಶಿಶು ಸಾವಿನ ಪ್ರಮಾಣ ಹೆಚ್ಚಾಗುತ್ತದೆ.
ಶಿಕ್ಷಣದಿಂದ ವಂಚಿತಳಾಗುತ್ತಾಳೆ:
ಶಿಕ್ಷಣವನ್ನು ಪಡೆದು ವಿದ್ಯಾವಂತೆಯಾಗಬೇಕಾದ ಹೆಣ್ಣು ವಿದ್ಯಾರ್ಥಿ ಜೀವನದ ಸಮಯದಲ್ಲಿಯೇ ಮದುವೆಯಾಗಿ ಶಾಲೆಗೆ ಹೋಗಲು ಆಗದೇ ಅನಕ್ಷರಸ್ಥಳಾಗುತ್ತಾಳೆ. ಶಿಕ್ಷಣದಿಂದ ವಂಚಿತಳಾದ ಮಹಿಳೆ ಸಮಾಜದಲ್ಲಿ ನಿಂದನೆಗೆ ಗುರಿಯಾಗುತ್ತಾಳೆ. ಇದು ಕ್ರಮೇಣ ಬಡತನಕ್ಕೂ ದಾರಿ ಮಾಡಿಕೊಡುತ್ತದೆ.
ವರದಕ್ಷಿಣೆ ಕಿರುಕುಳ:
ಬಾಲ್ಯವಿವಾಹದಿಂದ ಹೆಣ್ಣು ಎದುರಿಸುವ ಸಮಸ್ಯೆಗಳು ಒಂದೆರಡಲ್ಲ. ಪ್ರತಿನಿತ್ಯ ಗಂಡನ ನಿಂದನೆಯ ಜೊತೆಗೆ ವರದಕ್ಷಿಣೆಯನ್ನು ತರುವಂತೆ ಗಂಡನ ಮನೆಯವರು ಆಕೆಯನ್ನು ಹಿಂಸಿಸುತ್ತಾರೆ. ಒಂದು ವೇಳೆ ಆಕೆ ವರದಕ್ಷಿಣೆ ತರಲು ಅಸಮರ್ಥಳಾದಾಗ ಆಕೆಯ ಮೇಲೆ ದೈಹಿಕವಾದ ದೌರ್ಜನ್ಯದ ಜೊತೆಗೆ ಹಿಂಸೆ, ಕೊಲೆ ಪ್ರಕರಣಗಳೂ ನಡೆಯುತ್ತದೆ.
ಸಣ್ಣ ವಯಸ್ಸಿನಲ್ಲಿಯೇ ವಿಧವೆಯ ಪಟ್ಟ:
ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಮೂಲಕ ಹೆತ್ತವರು ಆಕೆಯನ್ನು ನರಕಕ್ಕೆ ತಳ್ಳುತ್ತಾರೆ. ಬಾಲ್ಯ ವಿವಾಹ ಪದ್ಧತಿಯಲ್ಲಿ ಮೊದಲಿಗೆ ಹೆಣ್ಣು ಅನುಭವಿಸುವ ನೋವಿನ ಪೈಕಿ ವಿಧವೆಯೆಂಬ ಪಟ್ಟ ಕೂಡಾ ಒಂದು. ಸಣ್ಣ ವಯಸಿನಲ್ಲಿಯೇ ಸಂಸಾರವೆಂಬ ಭವ ಬಂಧನಕ್ಕೆ ಸಿಲುಕುವ ಆಕೆಯ ಗಂಡ ಅಪಘಾತದಲ್ಲೋ ಅಥವಾ ಇನ್ನಾವುದೋ ದುರ್ಘಟನೆಯಲ್ಲಿ ಮರಣ ಹೊಂದಿದರೆ ಜೀವನ ಪರ್ಯಂತ ಆಕೆ ವಿಧವೆ ಎಂದು ಕರೆಸಿಕೊಂಡು ಸಮಾಜದಲ್ಲಿ ತುಳಿತಕ್ಕೆ ಒಳಗಾಗುತ್ತಾಳೆ. ಇತ್ತ ಶಿಕ್ಷಣವೂ ಇಲ್ಲದೆ, ಅತ್ತ ಕೆಲಸವೂ ಇಲ್ಲದೆ ಜೀವನ ಪರ್ಯಂತ ನೋವಿನಲ್ಲಿ ಜೀವನ ನಡೆಸುವಂತಾಗುತ್ತದೆ.
ಕಾನೂನಿನ ತಿದ್ದುಪಡಿ:
ಬಾಲ್ಯ ವಿವಾಹವನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಿದ ಭಾರತದ ಸಂವಿಧಾನವು ಅನೇಕ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಇದು ನಮ್ಮ ಸಂಪ್ರದಾಯ, ಸಂಸ್ಕ್ರತಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಇರುವುದರಿಂದ ಈ ಕಾರ್ಯ ಕಷ್ಟವಾಗಿದೆ. ಬಾಲ್ಯವಿವಾಹವನ್ನು ತಡೆಯಲು 1929ಕ್ಕೂ ಹಿಂದೆಯೇ ಬಾಲ್ಯ ವಿವಾಹ ಪ್ರತಿಬಂಧಕ ಆಧಿನಿಯಮವನ್ನು ಜಾರಿಗೆ ತರಲಾಗಿತ್ತು. ಇದರ ಪ್ರಕಾರ ಮದುವೆಯಾಗಲು ಹೆಣ್ಣಿಗೆ 18 ವರ್ಷ ಹಾಗೂ ಗಂಡಿಗೆ 21 ವರ್ಷವಾಗಿರಬೇಕು ಎಂಬುದಿತ್ತು. 2006 ರಲ್ಲಿ ಅನೇಕ ತಿದ್ದುಪಡಿ ಅಳಪಡಿಸಿಕೊಂಡು ಮತ್ತೊಮ್ಮೆ ಜಾರಿ ಮಾಡಲಾಗಿದೆ.
ಕಾನೂನಿನಲ್ಲಿ ಶಿಕ್ಷೆ:
ಬಾಲ್ಯವಿವಾಹವನ್ನು ಅಪರಾಧವೆಂದು ಪರಿಗಣಿಸಿರುವ ಭಾರತದ ಕಾನೂನಿನಲ್ಲಿ ಹದಿನೆಂಟು ವಯಸ್ಸು ತುಂಬಿದ ಪುರುಷ ಅಪ್ರಾಪ್ತ ಹುಡುಗಿಯನ್ನು ವಿವಾಹವಾದರೆ ಅದು ಅಪರಾಧ, ಹಾಗೂ ಅದಕ್ಕೆ ಶಿಕ್ಷೆ ಎರಡು ವರ್ಷ ಜೈಲು ಹಾಗೂ ಒಂದು ಲಕ್ಷ ರೂಪಾಯಿ ದಂಡ. ಇನ್ನು ಬಾಲ್ಯವಿವಾಹವನ್ನು ನೆರವೇರಿಸುವವರು ಸಹ ಅಪರಾಧಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರೂ ಸಹ ಇದೇ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಡೆಯಲು ಪ್ರಯತ್ನಿಸದ ಇಬ್ಬರ ತಂದೆ-ತಾಯಿಯರು ಸಹ ಉತ್ತರ ಕೊಡಲು ಜವಾಬ್ದಾರರಾಗಿರುತ್ತಾರೆ.
ಪ್ರತಿಯೊಬ್ಬ ನಾಗರಿಕನ ಕರ್ತವ್ಯ:
ಬಾಲ್ಯವಿವಾಹವನ್ನು ಮಾಡುವುದು ಮಾಡಿಸುವುದು ಎರಡು ಕೂಡ ಕಾನೂನಿನ ಪ್ರಕಾರ ಅಪರಾಧವಾಗಿದ್ದು ಇದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕನು ಕೂಡ ಸಹಕರಿಸಬೇಕು. ಒಂದು ವೇಳೆ ಯಾವುದೇ ವಿವಾಹದ ಬಗ್ಗೆ ಅನುಮಾನವಿದ್ದರೆ ಅದನ್ನು ತಡೆಯಬೇಕೆಂದು ಕೋರಿ ನ್ಯಾಯಾಲಯಕ್ಕೆ ಯಾರೇ ವ್ಯಕ್ತಿ ಅರ್ಜಿ ಸಲ್ಲಿಸಬಹುದಾಗಿದ್ದು ಅಂಥ ವಿವಾಹವನ್ನು ನಡೆಸಕೂಡದು ಎಂದು ನ್ಯಾಯಾಲಯ ನಿರ್ಬಂಧಕಾಜ್ಞೆಯನ್ನು ಹೊರಡಿಸಿದ ನಂತರವು ಅದನ್ನು ತಿರಸ್ಕರಿಸಿದರೆ ಅದು ಶಿಕ್ಷಾರ್ಹ ಅಪರಾಧ ಮತ್ತು ಅಂತಹ ಆಜ್ಞೆಯನ್ನು ಉಲ್ಲಂಘಿಸಿ ನಡೆದ ವಿವಾಹವು ತಾನಾಗಿಯೇ ಶೂನ್ಯಗೊಳ್ಳುತ್ತದೆ.





