ತೊಕ್ಕೊಟ್ಟು: ಮೂಲಸೌಕರ್ಯವನ್ನು ಒದಗಿಸದೆ ಟೋಲ್ ಸಂಗ್ರಹಿಸುವ ನವಯುಗ್ ಕಂಪೆನಿ ವಿರುದ್ಧ ಪಕ್ಷಾತೀತವಾಗಿ ಹಲವು ಸಂಘಟನೆಗಳು ಸೇರಿಕೊಂಡು ಫೆ.11 ರಂದು ತೊಕ್ಕೊಟ್ಟುವಿನಿಂದ ತಲಪಾಡಿವರೆಗೆ ರಸ್ತೆ ತಡೆ ಮತ್ತು ಬಸ್ ಬಂದ್ ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ತೊಕ್ಕೊಟ್ಟುವಿನಲ್ಲಿ ಇಂದು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ತಲಪಾಡಿಯಲಿ ಈಗಾಗಲೇ ಟೋಲ್ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರ ಪರವಾಗಿ ಜನರ ಸಮಸ್ಯೆಗೆ ಸ್ಪಂಧಿಸುವ ನಿಟ್ಟಿನಲ್ಲಿ ಬಂದ್ ಕರೆಯಲಾಗಿದೆ. ಜಿಲ್ಲಾಧಿಕಾರಿ, ನವಯುಗ್ , ಹೆದ್ದಾರಿ ಪ್ರಾಧಿಕಾರದ ಸಮ್ಮುಖದಲ್ಲಿ ಸಭೆಯ ನಡೆಸಲಾಗಿದೆ. ಆದರೆ ಯಾವುದೇ ರೀತಿಯ ಸ್ಪಂಧನೆ ದೊರೆತಿಲ್ಲ. ಇದು ಸಂಘಟನೆಗಳಿಗೆ ಸಮಾಧಾನವಾಗಿದೆ. ಪಂಪ್ ವೆಲ್ ಮತ್ತು ತೊಕ್ಕೊಟ್ಟುವಿನ ಫ್ಲೈಒವರ್ ಕಾಮಗಾರಿ, ಸರ್ವಿಸ್ ರಸ್ತೆಯೂ ಆಗಿಲ್ಲ. ಸಾರ್ವಜನಿಕರಿಗೆ ವಂಚಿಸುವ ನಿಟ್ಟಿನಲ್ಲಿ ಟೋಲ್ ಆರಂಭಿಸಲಾಗಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವುದರಿಂದ ಸರಕಾರ ಅನುಮತಿ ನೀಡಿರುವುದು ಖಂಡನೀಯ. ಸಂಸದರು ಇದಕ್ಕೆ ಕೂಡಲೇ ಸ್ಪಂಧಿಸಬೇಕಿದೆ. ನಾಳೆ ನಡೆಯುವ ಬಂದ್ ಗೆ ಟೂರಿಸ್ಟ್ ವಾಹನಗಳ, ರಿಕ್ಷಾ, ಖಾಸಗಿ ಚಾಲಕರು ಮಾಲಕರು, ಗಡಿನಾಡು ರಕ್ಷಣಾ ವೇದಿಕೆ, ತುಳುನಾಡು ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ನಡೆಯಲಿದೆ ಎಂದರು.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಖ್ ತಲಪಾಡಿ ಮಾತನಾಡಿ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ತೊಕ್ಕೊಟ್ಟುವಿನಿಂದ ತಲಪಾಡಿವರೆಗೆ ಬಂದ್ ನಡೆಯಲಿದೆ. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ನಡೆಸುವುದಿಲ್ಲ. ಅವರ ಇಚ್ಛೆಯನುಸಾರ ಬಂದ್ ನಡೆಸುವ ವಿಶ್ವಾಸವಿದೆ. ಬಸ್ಸು ಮಾಲೀಕರು ಬೆಂಬಲ ನೀಡಿರುವುದರಿಂದ ಖಾಸಗಿ ಬಸ್ಸುಗಳು ಸಂಪೂರ್ಣವಾಗಿ ಬಂದ ಆಗಲಿದೆ. ಆಂಬ್ಯುಲೆನ್ಸ್, ಪತ್ರಿಕಾ ವಾಹನ , ಹಾಲಿನ ವಾಹನ, ಔಷಧಿ ಅಂಗಡಿಗಳಿಗೆ ಬಂದ್ ವೇಳೆ ವಿನಾಯಿತಿ ಇದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಕೋಡಿಜಾಲ್, ಟೂರಿಸ್ಟ್ ವಾಹನ ಮತ್ತು ಮಾಲೀಕರ ಸಂಘದ ದಿನೇಶ್ ಕುಂಪಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಸ್ತಾಫ, ಗಣೇಶ್ ತಲಪಾಡಿ ಇತರರು ಇದ್ದರು.



