ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಕ್ಕೆ ಈ ರಾಜ್ಯದಲ್ಲಿ ಅನೇಕ ಸಾಹಿತಿಗಳು ಹಾಗೂ ಪ್ರಾಧ್ಯಾಪಕರಿದ್ದಾರೆ. ಅವರೆಲ್ಲರನ್ನು ಬಿಟ್ಟು ಶಿಕ್ಷಣ ಸಚಿವರು ಅವನು ಯಾವನೋ ಚರಂಡಿಯಲ್ಲಿದ್ದವನನ್ನು ಪ್ರೊಫೆಸರ್ ಎಂದು ಹೇಳಿ ಕರೆತಂದು ಈ ಜವಾಬ್ದಾರಿ ಕೊಟ್ಟರು' ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು,
ನಾನು ಪ್ರೊಫೆಸರ್ ಅಲ್ಲ ಎಂದು ಅವನೇ ಹೇಳಿದ್ದಾನೆ. ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ ಗೊತ್ತಿಲ್ಲ. ನಾಗಪುರ ವಿಶ್ವವಿದ್ಯಾಲಯದಿಂದ ಬಂದ ಇವರಿಗೆಲ್ಲ ಜವಾಬ್ದಾರಿ ಇಲ್ಲ. ನಾಳೆ ಪಠ್ಯಪುಸ್ತಕಗಳಲ್ಲಿ ಈ ವಿಚಾರಗಳನ್ನೆಲ್ಲ ಆರ್‍ಎಸ್‍ಎಸ್ ಸೇರಿಸಿದೆ ಎಂದರೆ, ಅದಕ್ಕೆ ಪುರಾವೆಯೇ ಇರುವುದಿಲ್ಲ. ಏಕೆಂದರೆ, ಅದು ನೊಂದಾಯಿತ ಸಂಸ್ಥೆಯೇ ಅಲ್ಲ. ಅದಕ್ಕೆ ಅಸ್ತಿತ್ವವೇ ಇಲ್ಲ. ಖಾಕಿ ಚಡ್ಡಿ, ಕರಿಟೋಪಿ ಹಾಗೂ ಕೈಯಲ್ಲಿ ದೊಣ್ಣೆ ಹಿಡಿದುಕೊಂಡವರು
ದೇಶವನ್ನು ಕಾಪಾಡುತ್ತೇವೆ’ ಎಂದು ಹೇಳುವ ಮೂಲಕ ದೇಶವನ್ನು ಕಾಯುತ್ತಿರುವ ಸೇನೆ, ಅರೆಸೇನಾ ಪಡೆಗಳು ಹಾಗೂ ಪೊಲೀಸರಿಗೆ ಅವಮಾನ ಮಾಡುತ್ತಿದ್ದಾರೆ. ನೂರು ಸಲ ಸುಳ್ಳು ಹೇಳುವುದೇ ಅವರ ಕೆಲಸ. ನಾವು ಯಾವತ್ತೂ ಸುಳ್ಳು ಹೇಳುವುದಿಲ್ಲ. ಅಪ್ಪಿ ತಪ್ಪಿ ಸುಳ್ಳು ಹೇಳಿದರೂ ಕ್ಷಮಾಪಣೆ ಕೇಳುತ್ತೇವೆ. ದೇಶದ ಏಕತೆ ಉಳಿಯಬೇಕಾದರೆ, ಧರ್ಮಾಂಧತೆಯ ಅಫೀಮು ತೆಗೆಯಲೇ ಬೇಕು’ ಎಂದರು.