
ಉಳ್ಳಾಲ: ಅ.6 ರಿಂದ 12ರ ವರೆಗೆ ಕೊಲ್ಯದ ಶ್ರೀ ಶಾರದಾ ಸೇವಾ ಟ್ರಸ್ಟ್ ,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ,ಶ್ರೀ ಶಾರದಾ ಮಂದಿರ ನಿರ್ಮಾಣ ಸಮಿತಿ ವತಿಯಿಂದ 43 ನೇ ವರ್ಷದ ಶಾರದಾ ಮಹೋತ್ಸವು ವಿಜೃಂಭಣೆಯಿಂದ ನಡೆಯಲಿದ್ದು, ಅ.7 ರಂದು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಶಾರದಾ ಮಂದಿರದ ಲೋಕಾರ್ಪಣೆ ನಡೆಯಲಿದೆ ಎಂದು ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಪ್ರದಾನ ಸಂಚಾಲಕರಾದ ಪ್ರವೀಣ್ ಎಸ್. ಕುಂಪಲ ತಿಳಿಸಿದರು.
ತೊಕ್ಕೊಟ್ಟಿನ ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಿಂದೆ ಕೊಲ್ಯದಲ್ಲಿನ ಶಾರದಾ ಕಟ್ಟೆಯಲ್ಲಿ ಶಾರದಾ ಮಾತೆಯ ಉತ್ಸವವನ್ನು ನಡೆಸಲಾಗುತ್ತಿತ್ತು.ಬಳಿಕ ಶಾರದಾ ಕಟ್ಟೆಯು ಶಾರದಾ ಸಭಾ ಭವನವಾಗಿತ್ತು.ಹೆದ್ದಾರಿ ಅಗಲೀಕರಣಕ್ಕೆ ಶಾರದಾ ಸಭಾ ಭವನವನ್ನು ಬಿಟ್ಟು ಕೊಟ್ಟಿದ್ದು, ಹಿಂದಿನ ಕಟ್ಟಡದ ಪೂರ್ವ ಭಾಗದಲ್ಲಿ ಹನ್ನೆರಡು ಸೆಂಟ್ಸ್ ಜಾಗ ಖರೀದಿಸಿ ಮೂರು ಸಮಿತಿಗಳು ಜಂಟಿಯಾಗಿ ಸಹೃದಯಿ ದಾನಿಗಳ ಸಹಕಾರದಿಂದ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಶಾರದಾ ಮಂದಿರವನ್ನು ನಿರ್ಮಿಸಲಾಗಿದೆ.
ಅ.6 ರಂದು ಶಾರದೋತ್ಸವ ಕಾರ್ಯಕ್ರಮ ಆರಂಭವಾಗಿ ಬೆಳಿಗ್ಗೆ ಉಗ್ರಾಣ ಮುಹೂರ್ತಕ್ಕೆ ಕಾಪಿಕಾಡು ಉಮಾ ಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಅವರು ದೀಪ ಪ್ರಜ್ವಲಿಸಲಿರುವರು.ಆ ದಿನ ಸಂಜೆ ನಾಲ್ಕು ಗಂಟೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಶಾರದಾ ಮಾತೆಯ ನೂತನ ಬೆಳ್ಳಿಯ ಬಿಂಬದೊಂದಿಗೆ ನಡೆಯಲಿರುವ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಗೆ ಚೀರುಂಭ ಭಗವತೀ ಕ್ಷೇತ್ರದ ಪ್ರದಾನ ಅರ್ಚಕರಾದ ಮಂಜಪ್ಪ ಕಾರ್ನವರ್ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದಾರೆ.ಸಂಜೆ 7.30 ಕ್ಕೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಜೀರು ನೃತ್ಯ ಲಹರಿ ನಾಟ್ಯಾಲಯದ ವಿದೂಷಿ ರೇಷ್ಮ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಅ.7 ರ ಸೋಮವಾರದಂದು ಬೆಳಿಗ್ಗೆ ಸೋಮೇಶ್ವರ ಸೋಮನಾಥ ದೇವಸ್ಥಾನದ ಅರ್ಚಕರಾದ ಮಧ್ವೇಶ್ ಭಟ್ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ನೂತನ ಬೆಳ್ಳಿಯ ಬಿಂಬ ಪ್ರತಿಷ್ಠೆ ನಡೆಯಲಿದೆ.ಬೆಳಿಗ್ಗೆ 10.30 ಕ್ಕೆ ನೂತನ ಶಾರದಾ ಮಂದಿರವನ್ನು ಮುಂಬಯಿಯ ಹೇರಂಭ ಇಂಡಸ್ಟ್ರೀಸ್ ನ ಮಾಲಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಲೋಕಾರ್ಪಣೆ ನಡೆಸಲಿದ್ದಾರೆ.ಗುರುಪುರ ವಜ್ರದೇಹಿ ಸಂಸ್ಥಾನದ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.ಸಂಜೆಯ ಧಾರ್ಮಿಕ ಸಭೆಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಮೋಹನ್ ಆಳ್ವ ಉದ್ಘಾಟಿಸಲಿರುವರು.ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ತಂಡರ್ ಗೈಸ್ ಡ್ಯಾನ್ಸ್ ಫೌಂಡೇಷನ್ ಬಜ್ಪೆ ಇವರಿಂದ ಕ್ಷೇತ್ರ-ಪುರಾಣ-ಮಂಜರಿ ಕಾರ್ಯಕ್ರಮ ನಡೆಯಲಿದೆ.
ಅ.8ರ ಮಂಗಳವಾರದಂದು ಬೆಳಿಗ್ಗೆ ಏಕಾಹ ಭಜನೆ ಪ್ರಾರಂಭಗೊಳ್ಳಲಿದ್ದು ಅತಿಥಿಗಳು ನಂದಾದೀಪ ಪ್ರಜ್ವಲಿಸಲಿದ್ದಾರೆ.ಸಂಜೆ 5.30 ಕ್ಕೆ ಶಾರದಾ ಮಾತೆಯ ವಿಗ್ರಹವು ಮೆರವಣಿಗೆಯೊಂದಿಗೆ ಮಂದಿರಕ್ಕೆ ಪ್ರವೇಶಿಸಲಿದೆ.
ಅ.9ರ ಬುಧವಾರ ಬೆಳಿಗ್ಗೆ 8.20ಕ್ಕೆ ಅರ್ಚಕರಾದ ಮಧ್ವೇಶ್ ಭಟ್ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ವಿಗ್ರಹದ ಪ್ರತಿಷ್ಠೆ ನಡೆಯಲಿದೆ.ಬೆಳಿಗ್ಗೆ 11 ಗಂಟೆಗೆ ಶಾರದಾ ಮಹಿಳಾ ಮಂಡಳಿ ಸದಸ್ಯರಿಂದ ಲಲಿತ ಸಹಸ್ರನಾಮ ,ಮಕ್ಕಳಿಗೆ ವಿದ್ಯಾರಂಭ ಪೂಜೆ ನಡೆಯಲಿದೆ.
ರಾತ್ರಿ 9 ಗಂಟೆಗೆ ವಿಧಾತ್ರಿ ಕಲಾವಿದೆರ್ ಕುಡ್ಲದ ಕಲಾವಿದರಿಂದ “ದೈವರಾಜೆ ಶ್ರೀ ಬಬ್ಬು ಸ್ವಾಮಿ”ಭಕ್ತಿ ಪ್ರದಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಅ.10 ರ ಗುರುವಾರ ಸಂಜೆ 6.30ಕ್ಕೆ ಮಾತೃ ಸಂಗಮ ನಡೆಯಲಿದ್ದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಊರ್ಮಿಳ ರಮೇಶ್ ಕುಮಾರ್ ಸಭೆಯನ್ನು ಉದ್ಘಾಟಿಸಲಿದ್ದಾರೆ.ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಸಾದ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡಲಿದ್ದು,ಅತಿಥಿ ಗಣ್ಯರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.ರಾತ್ರಿ 8.30 ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ನಡೆಯಲಿದೆ.
ಅ.11 ರ ಶುಕ್ರವಾರದಂದು ಬೆಳಿಗ್ಗೆ 10.30 ಕ್ಕೆ ಧಾರ್ಮಿಕ ಸಭಾ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಮಸ್ಕತ್ ನ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನ ಮನೆ ದೀಪ ಪ್ರಜ್ವಲಿಸಲಿದ್ದಾರೆ.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದು,ಸಭೆಯಲ್ಲಿ ಇನ್ನಿತರ ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸಂಜೆ 7 ಗಂಟೆಗೆ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ನಿರ್ದೇಶನದಲ್ಲಿ ” ಭಕ್ತಿ-ಭಾವ ಸಂಗೀತ-ಚಿತ್ರ ವೈಭವ” ನಡೆಯಲಿದೆ.ರಾತ್ರಿ 8 ಗಂಟೆಗೆ ರಂಗ ಪೂಜೆ ನಡೆದು ಮಹಾಪೂಜೆ ನೆರವೇರಲಿದೆ.
ಅ.12ರ ಶನಿವಾರ ಸಂಜೆ 6.30 ಕ್ಕೆ ಶ್ರೀ ಶಾರದಾ ಮಾತೆಗೆ ವಿಸರ್ಜನಾ ಮಹಾಪೂಜೆ ನಡೆದು ಕೊಲ್ಯದಿಂದ ಕೋಟೆಕಾರು ಮಾರ್ಗವಾಗಿ ಶೋಭಾಯಾತ್ರೆ ನಡೆದು ಸೋಮೇಶ್ವರ,ಸೋಮನಾಥ ದೇವಸ್ಥಾನದ ಕಡಲ ಕಿನಾರೆಯಲ್ಲಿ ಶಾರದಾ ಮಾತೆಯ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು.
ಶಾರದಾ ಮಹೋತ್ಸವದ ಏಳು ದಿನಗಳ ಅವಧಿಯಲ್ಲಿ ನಿತ್ಯವೂ ಮದ್ಯಾಹ್ನ ಮತ್ತು ರಾತ್ರಿ ಅನ್ನದಾನ ನಡೆಯಲಿದ್ದು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾರದಾ ಮಾತೆಯ ಕೃಪಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪ್ರವೀಣ್ ಕುಂಪಲ ವಿನಂತಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಶಾರದಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್.ಹೆಚ್ ,ಶಾರದಾ ಉತ್ಸವ ಸಮಿತಿ ಅಧ್ಯಕ್ಷರಾದ ಗಣೇಶ್ ಕೊಲ್ಯ ,ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ.ಎಸ್,ಶಾರದಾ ಮಂದಿರ ನಿರ್ಮಾಣ ಸಮಿತಿಯ ಪ್ರದಾನ ಕಾರ್ಯದರ್ಶಿ ತೋನ್ಸೆ ಪುಷ್ಕಲ್ ಕುಮಾರ್ ಉಪಸ್ಥಿತರಿದ್ದರು.
