
ಉಳ್ಳಾಲ : ಮಕ್ಕಳು ಪರೀಕ್ಷೆಗಳಿಗಾಗಿ ಓದದೇ ಬದುಕಿನ ಮೌಲ್ಯಗಳನ್ನು ತಿಳಿದುಕೊಳ್ಳುವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ನಿರಂತರವಾಗಿ ಅಧ್ಯಯನಶೀಲರಾಗಬೇಕು. ಶಿಕ್ಷಕರು ಕೂಡ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಲು ಹೆಚ್ಚಿನ ಒತ್ತನ್ನು ಕೊಡಬೇಕಾಗಿದೆ. ಇದರಿಂದ ಮುಂದೆ ಮಕ್ಕಳು ಸಮಾಜದಲ್ಲಿ ಅತ್ಯುತ್ತಮ ಪ್ರಜೆಯಾಗಿ ಮೂಡಿಬರಲು ಸಾಧ್ಯ.
ಹಾಗಾಗಿ ಇಂದು ವಿಶ್ವ ವಿದ್ಯಾನಿಲಯ ಸರಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಮೌಲ್ಯಾಧರಿತ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿದೆ. ಈ ದೃಷ್ಟಿಯಲ್ಲಿ ‘ ಬಾಲವಿಕಾಸ ‘ ಎನ್ನುವ ತರಬೇತಿ ಕಾರ್ಯಾಗಾರ ಒಂದು ಅರ್ಥಪೂರ್ಣವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ.ರಾಜು ಮೊಗವೀರ ಕೆ ಎ ಎಸ್ ಅವರು ಅಭಿಪ್ರಾಯ ಪಟ್ಟರು.


ಇವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ನೆಹರು ಚಿಂತನ ಕೇಂದ್ರದ ವತಿಯಿಂದ ಸರಕಾರಿ ಶಾಲೆಗಳ ದತ್ತು ಸ್ವೀಕೃತ ಯೋಜನೆಗೆ ಒಳಪಡುವ ಶಾಲೆಗಳಿಗೆ ಹತ್ತು ದಿನಗಳ ಕಾಲ ನಡೆಯಲಿರುವ ವಿಷಯಾಧರಿತ ತರಬೇತಿ ಕಾರ್ಯಗಾರ ಬಾಲವಿಕಾಸ 2025ನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ರಕ್ಷಿತ್ ಮತ್ತು ಸ್ನೇಹಾ ಗಣಿತವನ್ನು ಆಸಕ್ತಿದಾಯಕವಾಗಿ ಕಲಿಯುವುದು ಹೇಗೆ? ಸಂಖ್ಯೆಗಳನ್ನು ಅರ್ಥೈಸಿಕೊಳ್ಳುವ ಬಗೆಯನ್ನು ಸ್ವಾರಸ್ಯಕರವಾಗಿ ಮಕ್ಕಳಿಗೆ ತಿಳಿಸಿದರು. ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾದ
ಡಾ ಲವೀನಾ ಅವರು ವಿಜ್ಞಾನ ಕಲಿಕೆಯಲ್ಲಿ ವಿದ್ಯಾರ್ಥಿಗಳು ಬಹಳ ಆಸಕ್ತಿ ಯಿಂದ ಕಲಿಯುವ ಹಾಗೆ ಕೆಲವೊಂದು ವಿಜ್ಞಾನದ ಮಾದರಿಗಳನ್ನು ಮಕ್ಕಳಲ್ಲಿ ಮಾಡಿಸುವ ಮುಖೇನ ತರಬೇತಿಯನ್ನು ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಮಾತನಾಡಿ ಕಾರ್ಯಾಗಾರದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಮೂಡಿ ಬರಬೇಕು ಎಂದರು. ಮುಖ್ಯ ಅತಿಥಿಗಳಾದ ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾ ವರ್ಧಕ ಸಂಘದ ಸದಸ್ಯರು ದುರ್ಗಾಪ್ರಸಾದ್ ರೈ ಕಲ್ಲಾಯಿ, ನೆಹರು ಚಿಂತನ ಕೇಂದ್ರದ ಸಂಶೋಧನ ಸಹಾಯಕಿ ಡಾ. ನಯನ ಕೃಷ್ಣಾಪುರ, ಶ್ರೀಮತಿ ಸಂಧ್ಯಾ, ಶಿಕ್ಷಕರಾದ ಶ್ರೀಮತಿ ಕುಮುದ, ತ್ಯಾಗಮ್ ಹರೇಕಳ, ಶಿವಣ್ಣ, ಶ್ರೀಮತಿ ಸ್ಮಿತಾ ಮುಂತಾದವರು
ಉಪಸ್ಥಿತರಿದ್ದರು.
ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ನಿರೂಪಿಸಿದರು. ಶಿಕ್ಷಕರಾದ ಶಿವಣ್ಣ ಸ್ವಾಗತಿಸಿದರು .