
ಉಳ್ಳಾಲ: ಕಾಂಗ್ರೆಸ್ ಮುಖಂಡ, ಸ್ಪೀಕರ್ ಯು.ಟಿ.ಖಾದರ್ ಅವರ ಆಪ್ತ , ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಸುರೇಶ್ ಭಟ್ನಗರ ಇವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಭಟ್ನಗರ, ಕೆಲ ದಿನಗಳ ಹಿಂದೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆಂದು ಹೇಳಲಾಗಿದೆ. ತೀಯ ಸಮಾಜದಲ್ಲಿ ಮುಖಂಡರಾಗಿರುವ ಸುರೇಶ್ ಭಟ್ನಗರ ಇವರು ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸೋಮೇಶ್ವರ ಅಬ್ಬಕ್ಕಳಿಗೆ ಸಂಬಂಧಿಸಿದ ಕೆರೆಯ ಶಿಲನ್ಯಾಸ , ಭಗವತೀ ದೇವಸ್ಥಾನ ಕೊಲ್ಯ ಇಲ್ಲಿ ಮುಚ್ಚಳಿಗೆ ಅಳವಡಿಸುವ ಕಾರ್ಯಕ್ಕೆ ಸ್ಪೀಕರ್ ಯು.ಟಿ.ಖಾದರ್ ಶಿಲನ್ಯಾಸ ನೆರವೇರಿಸಿದ್ದರು. ಕಾರ್ಯಕ್ರಮದ ಕುರಿತು ಯಾವುದೇ ಮಾಹಿತಿಗಳನ್ನು ಧಾರ್ಮಿಕ ದತ್ತಿ ಇಲಾಖೆ ಸದಸ್ಯರಾದ ಸುರೇಶ್ ಅವರಿಗೆ ನೀಡಲಾಗಿಲ್ಲ. ಅಲ್ಲದೆ ಸೋಮೇಶ್ವರ ಪುರಸಭೆ ಸದಸ್ಯರೊಬ್ಬರ ನೇತೃತ್ವದಲ್ಲಿ ಕಾಮಗಾರಿಗಳ ಗುತ್ತಿಗೆಗಳನ್ನು ಬೇರೆಯವರಿಗೆ ನೀಡಲಾಗಿದೆ ಅನ್ನುವ ಅಸಮಾಧಾನವನ್ನು ಸುರೇಶ್ ಭಟ್ನಗರ ಹೊಂದಿದ್ದರು. ಇದರಿಂದ ಬೇಸತ್ತು ಕಳೆದ ನಾಲ್ಕು ದಿನಗಳ ಹಿಂದೆ ಸುರೇಶ್ ಭಟ್ನಗರ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ರಾಜೀನಾಮೆ ಸಲ್ಲಿಸಿದ್ದರೂ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸುರೇಶ್ ಭಟ್ನಗರ ಅವರು ವಾಪಸ್ಸಾಗಿದ್ದರು. ಇದೀಗ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಮುಖಂಡ ಸುರೇಶ್ ಭಟ್ನಗರ ಅವರು ಮುಂದಿನ ದಿನಗಳಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವ ಮನಸ್ಸೂ ಮಾಡಿದ್ದಾರೆ ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.