

ನರಿಂಗಾನ: ಮಾನಸಿಕ ಅಸಮತೋಲನ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಸಮಾನವಾದ ನಡವಳಿಕೆಗೆ ಅಡಚಣೆಯಾಗಬಹುದು. ಪ್ರತಿದಿನ ಕೇವಲ 20 ನಿಮಿಷ ವ್ಯಾಯಾಮ ಮಾಡಿದರೂ, ದೇಹದ ಜೊತೆಗೆ ಮನಸ್ಸಿಗೂ ಶ್ರೇಷ್ಠವಾದ ಶಾಂತಿ ದೊರೆಯುತ್ತದೆ. ಯೋಗ ಮತ್ತು ಧ್ಯಾನ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮಾನಸಿಕ ವಿಭಾಗಗಳ ಸಾಮಾಜಿಕ ಕಾರ್ಯಕರ್ತೆ ದೀಪ್ತಿ ಅಭಿಪ್ರಾಯಪಟ್ಟರು.
ಅವರು ನರಿಂಗಾನ ಗ್ರಾಮದ ಕಲ್ಲರಕೋಡಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಲೈಫ್ ನೆಸ್ಟ್ ಟ್ರಸ್ಟ್ , ಉಳ್ಳಾಲವಾಣಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಹೆಲ್ದೀ ಹ್ಯಾಬಿಟ್ಸ್ ಆಂಡ್ ನಿಶಬ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಏಕಾಂತ ಬಯಸುವುದು, ನಿದ್ರೆ ಸಮಸ್ಯೆ, ಏಕಾಗ್ರತೆಯ ಕೊರತೆ, ಆಸಕ್ತಿಯ ಕೊರತೆಯು ಒತ್ತಡಗಳಿಂದ ಹೆಚ್ಚಾಗಬಹುದು. ಓದು ಮತ್ತು ಆಟಕ್ಕೆ ಸಮಾನ ಪ್ರಮಾಣದಲ್ಲಿ ಸಮಯ ಕಾದಿರಿಸಿ. ವಿಶ್ರಾಂತಿ ಕೂಡ ಮುಖ್ಯವೆಂದು ಪರಿಗಣಿಸಿಕೊಂಡು ಕಲಿಕೆ ಮುಂದುವರಿಸಬೇಕಿದೆ ಎಂದರು.
ಪ್ರಸೂತಿ ಹಾಗೂ ಗರ್ಭಿಣಿಯರ ವಿಭಾಗದ ಡಾ. ನಿಶಾ ಎಂ. ಮಾತನಾಡಿ, ಪ್ರಾಯೋದ್ಭವ ಹಂತದಲ್ಲಿ ದೇಹದ ಬೆಳವಣಿಗೆ ನಡೆಯುವುದರಿಂದ ಪೌಷ್ಠಿಕಾಂಶ ತುಂಬಿರುವ ಆಹಾರ ಸೇವಿಸುವುದು ಅತೀ ಮುಖ್ಯ. ಹಣ್ಣು, ತರಕಾರಿಗಳು, ಪ್ರೋಟೀನ್ ಹಾಗೂ ಕಬ್ಬಿಣವನ್ನು ಒಳಗೊಂಡ ಆಹಾರವನ್ನೂ ಕೂಡ ಸೇರಿಸಿಕೊಳ್ಳಬೇಕಿದೆ. ಆರೋಗ್ಯದ ಮೇಲೆ ಒತ್ತಡವನ್ನು ನಿವಾರಿಸುವಲ್ಲಿ ಶಾರೀರಿಕ ಚಟುವಟಿಕೆ ಬಹಳ ಮುಖ್ಯ ಎಂದರು.
ದೈನಂದಿನ ಜೀವನದಲ್ಲಿ ಶೌಚಾಲಯದ ಸ್ವಚ್ಛತೆ, ಶುದ್ಧ ನೀರಿನ ಬಳಕೆ ಮತ್ತು ಸ್ನಾನ ಮುಂತಾದದ್ದು ಹೆಚ್ಚು ಮುಖ್ಯ. ಈ ಮೂಲಕ ಸೋಂಕುಗಳಿಂದ ದೂರ ಇರಬಹುದು. ಪ್ರಾಯೋದ್ಭವದ ಹಂತದಲ್ಲಿ ಮಾಸಿಕ ಚಕ್ರ ಆರಂಭವಾಗುವುದು ಸಹಜ. ಇದನ್ನು ಎಲ್ಲ ವಿದ್ಯಾರ್ಥಿನಿಯರು ಸಹಜವಾಗಿ ಒಪ್ಪಿಕೊಂಡು ವೈಜ್ಞಾನಿಕ ದೃಷ್ಟಿಕೋನ ಹೊಂದಬೇಕು. ಈ ಸಮಯದಲ್ಲಿ ಸುರಕ್ಷಿತ ಶೌಚನೀತಿ ಹಾಗೂ ಶೌಚಾಲಯದ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಅಗತ್ಯ ಎಂದರು.
ಈ ಸಂದರ್ಭ ಕಿವಿ,ಮೂಗು , ಕಣ್ಣು ವಿಭಾಗದ ಸಹಾಯಕ ಪ್ರೊ. ಡಾ. ಗೌತಮ್ ಎಂ.ಕೆ, ಕಲ್ಲರಕೋಡಿ ದ.ಕ.ಜಿ.ಪಂ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಜಾತಾ ಉಪಸ್ಥಿತರಿದ್ದರು. ಶಿಕ್ಷಕಿ ಸೀಮ ಮರಿಯಾ ಡಿಸೋಜ ಸ್ವಾಗತಿಸಿದರು. ವಿನಿತಾ ನಿರೂಪಿಸಿದರು. ಜಯಲಕ್ಷ್ಮೀ ಜಿ. ವಂದಿಸಿದರು.