

ಉಳ್ಳಾಲ: ಕಳೆದ ವರ್ಷ ಶ್ರೀ ಕ್ಷೇತ್ರ ಕೊಂಡಾಣದಲ್ಲಿ ಶೇ.80 ರಷ್ಟು ಕಾಮಗಾರಿ ಮುಗಿದಿದ್ದ ಭಂಡಾರ ಮನೆಯನ್ನು ಒಡೆದುಹಾಕಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಗುರಿಕಾರ ಮುತ್ತಣ್ಣ ಶೆಟ್ಟಿ ಪ್ರಕರಣ ಇತ್ಯರ್ಥ ಆಗುವವರೆಗೂ ಜಾತ್ರಾ ಸಂದರ್ಭ ಗುರಿಕಾರ ಸ್ಥಾನದಲ್ಲಿ ನಿಲ್ಲಬಾರದು ಎಂದು ಅಪರ ಜಿಲ್ಲಾಧಿಕಾರಿ, ಧಾರ್ಮಿಕ ಪರಿಷತ್ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ ಹರಕೆ ವಿಚಾರಕ್ಕೆ ಸಂಬಂಧಿಸಿ ಮುತ್ತಣ್ಣ ಅವರನ್ನು ಯಾರು ಕೂಡಾ ಸಂಪರ್ಕಿಸಬಾರದು ಎಂದು ಶ್ರೀ ಕ್ಷೇತ್ರ ಕೊಂಡಾಣ ಇದರ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ , ಸನಾತನ ಧರ್ಮ ಜಾಗರಣಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ನೂತವಾಗಿ ರಚಿಸಿದ ಭಂಡಾರ ಮನೆಯನ್ನು ಮಾ.3 ರಂದು ಮುತ್ತಣ್ಣ ಶೆಟ್ಟಿ ಮತ್ತು ಬಳಗ ಒಡೆದು ಹಾಕಿದೆ. 2024ರ ಫೆ.29 ತನ್ನ ಅಧಿಕಾರ ಅವಧಿ ಮುಗಿದಿದ್ದು, ಜಿಲ್ಲಾಧಿಕಾರಿಯವರ ಆದೇಶದಂತೆ ಕೋಟೆಕಾರು ಮುಖ್ಯಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರ ಮಾಡಲಾಗಿತ್ತು. ಅಧಿಕಾರ ಹಸ್ತಾಂತರದ ಬೆನ್ನಲ್ಲೇ ಸರಕಾರಿ ಅನುದಾನದಿಂದ ಶೆ.80 ರಷ್ಟು ರಚನೆಯಾದ ಭಂಡಾರಮನೆಯನ್ನು ಜೆಸಿಬಿ ಮೂಲಕ ಒಡೆದುಹಾಕಲಾಗಿತ್ತು. ಈ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಡೆದು ಹಾಕಿದ ಮುತ್ತಣ್ಣ ಶೆಟ್ಟಿ ಮತ್ತು ಬಳಗದ ವಿರುದ್ಧ ದೂರು ದಾಖಲಿಸಿ ಪ್ರಕರಣ ದಾಖಲು ಮಾಡಲಾಗಿತ್ತು. ಅಲ್ಲದೇ ಮಾ.4 ರಂದು ಕೋಟೆಕಾರು ಪ.ಪಂ ಮುಂಭಾಗದಲ್ಲಿ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು. ಘಟನೆ ಕುರಿತು ಧಾರ್ಮಿಕ ಪರಿಷತ್ , ಎಡಿಸಿ ತನಿಖೆ ನಡೆಸಿ ಪ್ರಥಮ ಆರೋಪಿ ಮುತ್ತಣ್ಣ ಶೆಟ್ಟಿಗೆ ಮಾ.4 ರಂದು ನೋಟೀಸು ನೀಡಲಾಗಿತ್ತು. ಆರೋಪಿತ ಮುತ್ತಣ್ಣ ಶೆಟ್ಟಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಾಗಿರುವುದರಿಂದ ಗುರಿಕಾರ ಸ್ಥಾನವನ್ನು ಪವಿತ್ರ ಕ್ಷೇತ್ರದಲ್ಲಿ ನಿರ್ವಹಿಸಬಾರದು ಎಂದು ಫೆ.27 ಆದೇಶ ಬಂದಿದೆ. ಪ್ರಕರಣ ಇತ್ಯರ್ಥ ಆಗದೇ ಗುರಿಕಾರ ಸ್ಥಾನದಲ್ಲಿ ನಿಲ್ಲಬಾರದೆಂಬ ಆದೇಶ ಆಯುಕ್ತರಿಂದ ಹೊರಡಿಸಲಾಗಿದೆ. ಆದರೆ ವೈದ್ಯನಾಥನ ವಲಸರಿ ಜಾತ್ರೆಯಲ್ಲಿ ಆದೇಶ ಉಲ್ಲಂಘಿಸಿ ಮುಂಡಾಸು ಕಟ್ಟಿ ಮುತ್ತಣ್ಣ ಶೆಟ್ಟಿ ನಿಂತಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿಯು ಕಾನೂನು ಉಲ್ಲಂಘಿಸದಂತೆ ನೂತನ ವ್ಯವಸ್ಥಾಪನಾ ಸಮಿತಿಗೆ ಆದೇಶ ಜಾರಿ ಮಾಡಲಾಗಿದೆ. ಕೃತ್ಯ ನಡೆದ ದಿನದಂದು ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವದ ಗರ್ಭಗುಡಿ ಎದುರು ಪ್ರಾರ್ಥನೆ ನಡೆಸಿದ್ದೇವೆ. ಪ್ರಾರ್ಥನೆಯ ಫಲವಾಗಿ ಮುಖ್ಯ ಸ್ಥಾನದಲ್ಲಿ ನಿಲ್ಲದಂತೆ ಆದೇಶ ಬಂದಿದೆ. ಕೊಂಡಾಣದ ಬಗ್ಗೆ ಮುತ್ತಣ್ಣ ಶೆಟ್ಟಿ ಬಳಿ ಹರಕೆ ರೂಪಕ್ಕೆ ಯಾರೂ ಸಂಪರ್ಕಿಸಬಾರದು. ಮುತ್ತಣ್ಣ ಶೆಟ್ಟಿಗೂ ಕೊಂಡಾಣ ಕ್ಷೇತ್ರಕ್ಕೂ ಸಂಬಂಧವಿಲ್ಲವೆAದು ಧಾರ್ಮಿಕ ಪರಿಷತ್ ನಿಂದಲೇ ಆದೇಶವಿದೆ. 5 ಸೆಂಟ್ಸ್ ಜಾಗ ಕ್ಷೇತ್ರದ ವತಿಯಿಂದ ಖರೀದಿಸಿಲಾಗಿದ್ದು, ಇನ್ನು 5 ಸೆಂಟ್ಸ್ ದಾನಿಗಳ ಸಹಕಾರದಿಂದ ಸರಕಾರಕ್ಕೆ 43,070 ರೂ. ಪಾವತಿಸಿಯೇ ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಕಟ್ಟಡವನ್ನು ಕಟ್ಟಲಾಗಿದೆ. ಹಾಗಾಗಿ ಕಟ್ಟಿದಂತಹ ಕಟ್ಟಡವನ್ನು ಮುತ್ತಣ್ಣ ಶೆಟ್ಟಿ ಮಾತ್ರವಲ್ಲ ಜಿಲ್ಲಾಧಿಕಾರಿಗೆ ಒಡೆದು ಹಾಕುವ ಹಕ್ಕಿಲ್ಲ. ಮೂರು ವರ್ಷದ ಅವಧಿಯಲ್ಲಿ ಜಾತ್ರಾ ಸಂದರ್ಭ ಪ್ರತಿ ದಿನ 18,8,432 ಲಕ್ಷ ರೂ. ಆದಾಯ ಕಾಣಿಕೆ ಹುಂಡಿಗೆ ಭಕ್ತರಿಂದ ಬರುತ್ತದೆ. ಪ್ರತಿದಿನ ಹಣವನ್ನು ಬ್ಯಾಂಕಿಗೆ ತನ್ನ ಅಧಿಕಾರದ ಅವಧಿಯಲ್ಲಿ ಕಟ್ಟಲಾಗಿದೆ. ಆದರೆ ಮುತ್ತಣ್ಣ ಶೆಟ್ಟಿ ನೇತೃತ್ವದಲ್ಲಿದ್ದಂತಹ ಸಮಿತಿ ಬ್ಯಾಂಕಿಗೆ ನಗದನ್ನೇ ಪಾವತಿಸಿಲ್ಲ, ಲೆಕ್ಕ ಪತ್ರವನ್ನೇ ಮಂಡಿಸಿಲ್ಲ. ಸ್ವಾರ್ಥದ ಲಾಭಕ್ಕಾಗಿ ಮಾಡಿದಂತಹ ವ್ಯವಸ್ಥೆಯಿಂದಾಗಿ ತಗಾದೆ ಎದ್ದಿದೆ. 10 ವರ್ಷಗಳ ಹಿಂದೆ ಖಾಸಗಿ ಫೈನಾನ್ಸ್ ನವರ ಕೈಯಲ್ಲಿ ರೂ. 10 ಲಕ್ಷ ಹಣವನ್ನು ಮುತ್ತಣ್ಣ ಶೆಟ್ಟಿ ನೀಡಿದ್ದು, ಅದರ ಲಾಭ ತಿಂಗಳಿಗೆ ರೂ. 30,000 ಬರುತ್ತಿದೆ ಎಂಬುದು ಫೈನಾನ್ಸ್ ನವರೇ ತನ್ನ ಬಳಿ ಹೇಳಿದ್ದಾರೆ. 1931 ರಲ್ಲಿ ಮದ್ರಾಸ್ ಸರಕಾರದ ಅವಧಿಯಲ್ಲಿ ಕ್ಷೇತ್ರ ಎಂಡೋಮೆಂಟ್ ಆಗಿದೆ. 1950 ರಲ್ಲಿ ಅಂದಿನ ಅಧಿಕಾರಿಗಳು ಹೊರಡಿಸಿರುವ ಆದೇಶದ ಪ್ರತಿಯಲ್ಲಿ ಭಂಡಾರಮನೆ, ಮತ್ತು ಭದ್ರತಾ ಕೊಠಡಿ ದೈವಸ್ಥಾನದ ಪಕ್ಕದಲ್ಲೇ ಆಗಬೇಕು ಅನ್ನುವುದು ಇದೆ. ಅದರ ಪ್ರಕಾರ ಭಂಡಾರಮನೆಯನ್ನು ದೈವಸ್ಥಾನದ ಸಮೀಪದಲ್ಲೇ ಕಟ್ಟಲಾಗಿತ್ತು ಎಂದರು.
ಮೇ 21ರಿಂದ 23 ವರಗೆ ಕೊಂಡಾಣ ಜಾತ್ರೆ
ಮೇ.21 ,22,23 ಶ್ರೀ ಕ್ಷೇತ್ರ ಕೊಂಡಾಣದಲ್ಲಿ ವಾರ್ಷಿಕ ನೇಮ ಜರಗಲಿದೆ. ಭಂಡಾರ ಬರುವುದು, ಬಂಟ ನೇಮ ಹಾಗೂ ರಾತ್ರಿ ಬಂಡಿ ಉತ್ಸವ ಜರಗಲಿದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಕಡೇ ಬಂಡಿ ಉತ್ಸವವಾಗಿದೆ. ಅತ್ಯಂತ ಕಾರಣೀಕ ಕ್ಷೇತ್ರ ಕೊಂಡಾಣ ಆಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರಮೇಶ್ ಕೊಲ್ಯ, ಜಯಂತ್ ಸಂಕೊಳಿಗೆ ಉಪಸ್ಥಿತರಿದ್ದರು.
