ಕೊಣಾಜೆ: ಅಮಿಟಿ ವಿಶ್ವವಿದ್ಯಾಲಯ, ನೊಯ್ಡ, ಇಲ್ಲಿ ಮಾ. 3 ರಿಂದ 7ರ ವರೆಗೆ ನಡೆದ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ (ಎಐಯು) ವತಿಯಿಂದ ಆಯೋಜಿಸಿದ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸ್ಪಾಟ್ ಫೊಟೊಗ್ರಾಫಿಯಲ್ಲಿ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕಿರುನಾಟಕ ದ್ವಿತೀಯ ಸ್ಥಾನ., ಶಾಸ್ತ್ರೀಯ ತಾಳವಾದ್ಯ (ವೈಯುಕ್ತಿಕ) – ತೃತೀಯ ಸ್ಥಾನ, ಜನಪದ ನೃತ್ಯ – ತೃತೀಯ ಸ್ಥಾನ, ಶಾಸ್ರೀಯ ನೃತ್ಯ (ಭಾರತೀಯ) – ದ್ವಿತೀಯ ಸ್ಥಾನ, ಶಾಸ್ತ್ರೀಯ ಸಂಗೀತ (ಹಿಂದುಸ್ಥಾನಿ/ಕರ್ನಾಟಕ್) ದ್ವಿತೀಯ ಸ್ಥಾನ, ಶಾಸ್ತ್ರೀಯ ಸ್ವರ ವಾದ್ಯ (ವೈಯಕ್ತಿಕ) ದ್ವಿತೀಯ ಸ್ಥಾನ, ಲಘ ಸಂಗೀತ (ಭಾರತೀಯ) – ದ್ವಿತೀಯ ಸ್ಥಾನ, ಜನಪದ ಸಂಗೀತ ಮೇಳ – ಪ್ರಥಮ ಸ್ಥಾನ, ಸಮೂಹಗಾನ (ಭಾರತೀಯ) 5ನೇ ಸ್ಥಾನ ಪಡೆದುಕೊಂಡರು.
ಸಾಂಸ್ಕೃತಿಕ ಮೆರವಣಿಗೆಯಲ್ಲಿ 4ನೇ ಸ್ಥಾನ ಬಹುಮಾನ ಗಳನ್ನು ಪಡೆದುಕೊಂಡಿದೆ.

ಭಾರತದಾದ್ಯಂತ 152 ವಿಶ್ವವಿದ್ಯಾನಿಲಯದಿಂದ ಆಗಮಿಸಿಸಿದ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪ್ರರ್ಧೆಗಳಲ್ಲಿ ಭಾಗವಹಿಸಿದ್ದರು. ನೃತ್ಯ ವಿಭಾಗದಲ್ಲಿ ಚಾಂಪಿಯನ್ ಶಿಪ್ ತೃತೀಯ ಸ್ಥಾನ. ಸಮಗ್ರ ಪ್ರಶಸ್ತಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.
ಆಳ್ವಾಸ್ ಕಾಲೇಜು ಮೂಡಬಿದಿರೆ, ಗೋವಿಂದ ದಾಸ ಕಾಲೇಜು, ಸುರತ್ಕಲ್ ಕೆನರಾ ಕಾಲೇಜು ಮಂಗಳೂರು, ಮಂಗಳಗಂಗೋತ್ರಿ ಕ್ಯಾಂಪಸ್ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ, ಪ್ರೊ. ಪ್ರಶಾಂತ ನಾಯ್ಕ, ಡಾ. ಲವೀನಾ ಕೆ.ಬಿ. ಮತ್ತು ಡಾ. ವೆಂಕಟೇಶ್ ಹೆಚ್. ಎಸ್. (ಟೀಮ್ ಮ್ಯಾನೆಜರ್) ಮಂಗಳೂರು ವಿಶ್ವವಿದ್ಯಾನಿಲಯ ತಂಡದ ನೇತೃತ್ವವನ್ನು ವಹಿಸಿದ್ದರು. ವಿದ್ಯಾರ್ಥಿಗಳು ಹಾಗೂ ಪಕ್ಕವಾದ್ಯದವರು ಒಟ್ಟು 38 ಜನರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ದೆಗಳನ್ನು ಆಯೋಜಿಸಿ ಅದರಲ್ಲಿ ಪ್ರಶಸ್ತಿ ಪಡೆದು ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆದ ಆಗ್ನೇಯ ವಲಯ ಮಟ್ಟದ ಯುವಜನೋತ್ಸವದ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿ ರಾಷ್ಟ್ರೀಯ ಮಟ್ಟದ ಯುವ ಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿತ್ತು. ಮುಂದಿನ ಹಂತವಾಗಿ, ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಅಂತರಾಷ್ಟ್ರೀಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಹಾಗೂ ಕುಲಸಚಿವರಾದ ಕೆ. ರಾಜು ಮೊಗವೀರ ಕೆಎಎಸ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.