
ಬೆಂಗಳೂರು : ತನ್ನಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಿದ ಗೃಹಿಣಿಯನ್ನು ಯುವಕನೊಬ್ಬ ಹೋಟೆಲ್‌ಗೆ ಕರೆದೊಯ್ದು 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆರೋಪಿಯನ್ನು ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಕೆಂಗೇರಿಯ ಹರಿಣಿ (33) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪದ ಅಡಿ ಟೆಕಿ ಯಶಸ್ (25) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಜೂನ್ 7ರಂದು ರಾತ್ರಿ ಠಾಣಾ ವ್ಯಾಪ್ತಿಯ ಪೂರ್ಣಪ್ರಜ್ಞಾ ಲೇಔಟ್‌ನ ಖಾಸಗಿ ಹೋಟೆಲ್‌ವೊಂದರಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
‘ಹರಿಣಿ ಅವರು ದಾಸೇಗೌಡ ಎಂಬುವವರನ್ನು 2012ರಲ್ಲಿ ಮದುವೆ ಆಗಿದ್ದರು. ದಂಪತಿ ಕೆಂಗೇರಿಯಲ್ಲಿ ವಾಸವಿದ್ದರು. ದಂಪತಿಗೆ 13 ಹಾಗೂ 10 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಜಾತ್ರೆಯಲ್ಲಿ ಹರಿಣಿ ಅವರು ತಲಘಟ್ಟಪುರದ ನಿವಾಸಿ ಯಶಸ್‌ಗೆ ಪರಿಚಯವಾಗಿದ್ದರು. ಇಬ್ಬರೂ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ನಿತ್ಯ ಮಾತುಕತೆ ನಡೆಸುತ್ತಿದ್ದರು. ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದಿತ್ತು. ಇಬ್ಬರೂ ಆಗಾಗ್ಗೆ ಭೇಟಿ ಮಾಡುತ್ತಿದ್ದರು. ವಾಟ್ಸ್ಆ್ಯಪ್‌ನಲ್ಲಿ ಚಾಟಿಂಗ್ ನಡೆಸುತ್ತಿದ್ದರು. ಪತ್ನಿಯ ನಡೆ ಪತಿಗೆ ಅನುಮಾನ ತರಿಸಿತ್ತು’ ಎಂದು ಮೂಲಗಳು ತಿಳಿಸಿವೆ.
ಫೋನ್ ಕಸಿದುಕೊಂಡು ಬುದ್ಧಿಮಾತು ಹೇಳಿದ್ದ ಪತಿ : ‘ದಾಸೇಗೌಡ ಅವರು ಪತ್ನಿಯ ಫೋನ್ ಕಸಿದುಕೊಂಡು ಮನೆಯಲ್ಲೇ ಇರುವಂತೆ ಬುದ್ಧಿಮಾತು ಹೇಳಿದ್ದರು. ಅದರ ಮಾಹಿತಿ ತಿಳಿದಿದ್ದ ಆರೋಪಿ ಯಶಸ್, ಹರಿಣಿ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದ. ಕೆಲವು ದಿನಗಳ ನಂತರ ಮನೆಯಿಂದ ಹೊರ ಬಂದಿದ್ದ ಹರಿಣಿ. ಮತ್ತೆ ತನ್ನ ಗೆಳೆಯನನ್ನು ಸಂಪರ್ಕಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾಕು ಖರೀದಿಸಿದ್ದ ಆರೋಪಿ : ‘ಹರಿಣಿ ಮತ್ತೆ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಭಾವಿಸಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಚಾಕು ಸಹ ಖರೀದಿಸಿದ್ದ. ಜೂನ್ 7ರಂದು ಆಕೆಯನ್ನು ಸಂಪರ್ಕಿಸಿ ತಮ್ಮ ಜೊತೆಗೆ ಮಾತನಾಡಬೇಕಿದ್ದು, ಪೂರ್ಣಪ್ರಜ್ಞಾ ಲೇಔಟ್‌ಗೆ ಬರುವಂತೆ ತಿಳಿಸಿದ್ದ. ಆರೋಪಿ ಮಾತು ನಂಬಿದ್ದ ಹರಿಣಿ, ಅಂದು ರಾತ್ರಿ ಹೋಟೆಲ್ ಬಳಿಗೆ ಬಂದಿದರು’ ಎಂದು ಪೊಲೀಸರು ಹೇಳಿದರು.
‘ಓಯೋ ರೂಂ ಪಡೆದು ಅಲ್ಲಿಗೆ ಮಹಿಳೆಯನ್ನು ಆರೋಪಿ ಕರೆದೊಯ್ದಿದ್ದ. ಅಲ್ಲಿ ದೇಹದ ವಿವಿಧೆಡೆ ಇರಿದು ಕೊಲೆ ಮಾಡಿದ್ದ. ಅದೇ ಚಾಕುವಿನಿಂದ ಗಾಯ ಮಾಡಿಕೊಂಡು ಆತ್ಮಹತ್ಯೆ ನಾಟಕವಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃತ್ಯ ನಡೆದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಸುಬ್ರಮಣ್ಯಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
‘ಆರೋಪಿಯ ವಿಚಾರಣೆ ನಡೆಸಿದಾಗ ತನ್ನಿಂದ ಮಹಿಳೆ ಅಂತರ ಕಾಪಾಡಿಕೊಳ್ಳಲು ಬಯಸಿದ್ದರಿಂದ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸುಬ್ರಮಣ್ಯಪುರ ಪೊಲೀಸರು ಆರೋಪಿ ಯಶಸ್‌ನನ್ನು ವಿಚಾರಣೆ ಮುಂದುವರೆಸಿದ್ದಾರೆ’ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದರು.