
ಉಳ್ಳಾಲ: ಕೆ.ಪಾಂಡ್ಯರಾಜ ಬಲ್ಲಾಳ್ ನರ್ಸಿಂಗ್ ಕಾಲೇಜು ಉಳ್ಳಾಲ ಇದರ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮವು ಮಂಗಳವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರ ಬೊಳಿಯಾರ್ ನ ವೈದ್ಯಾಧಿಕಾರಿ ಡಾ. ಸುನೀತಾ ಮಾತನಾಡಿ, ಮಹಿಳೆಯರು ಶಕ್ತಿಶಾಲಿಗಳಾಗಬೇಕು. ಈ ಮೂಲಕ ಎಲ್ಲವನ್ನು ಮೆಟ್ಟಿ ನಿಂತು ಸ್ವತಂತ್ರರಾಗಿ ಬದುಕಬೇಕು. ಪ್ರತಿಯೊಂದು ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಈ ಮೂಲಕ ಸಮಾಜದ ಎಲ್ಲ ಮಹಿಳೆಯರನ್ನು ಒಟ್ಟುಗೂಡಿಸಿ ವಿದ್ಯೆಯ ಮಹತ್ವವನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಬೇಕು ಈ ಮೂಲಕ ಮುಂದಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮ ಪ್ರಯುಕ್ತ ಸಮಾಜಸೇವಕಿ ಸುವಾಸಿನಿ ದಾಮೋದರ್ ಬಬ್ಬುಕಟ್ಟೆ , ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಧನ್ಯಶ್ರೀ , ಕೃಷಿ ಮತ್ತು ಹೈನುಗಾರಿಕೆ ಯ ರೇವತಿ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರು ಇದರ ವೈದ್ಯಾಧಿಕಾರಿ ಡಾ. ಮದನ್ ಕುಮಾರ್ ಜಿ, ಕೆ.ಪಿ.ಬಿ.ಎನ್.ಐ ನರ್ಸಿಂಗ್ ಕಾಲೇಜು ಇದರ ಪ್ರಾಂಶುಪಾಲೆ ಪ್ರೊ. ಸೋನಿಯಾ ಸೆಬಾಸ್ಟಿಯನ್ , ಉಪ ಪ್ರಾಂಶುಪಾಲೆ ಪದ್ಮಾವತಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.





