



ಬೆಂಗಳೂರು/ರಾಮನಗರ: ಬೆಂಗಳೂರು ಹಾಲು ಒಕ್ಕೂಟವು (ಬಮೂಲ್) ಮಣ್ಣಿನಲ್ಲಿ ಕರಗಬಲ್ಲ ಪ್ಲಾಸ್ಟಿಕ್‌ನಲ್ಲಿ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಪರಿಸರ ಸ್ನೇಹಿ ಹೆಜ್ಜೆ ಇರಿಸಿದೆ.
ಸದ್ಯ ಬಳಕೆಯಾಗುತ್ತಿರುವ ಪಾಲಿಥಿನ್ ಪೊಟ್ಟಣಗಳ ಬದಲಿಗೆ ಜೈವಿಕವಾಗಿ ವಿಘಟನೆಯಾಗುವ (ಬಯೋಡಿಗ್ರೇಡೆಬಲ್) ಪ್ಲಾಸ್ಟಿಕ್ ಪೊಟ್ಟಣದಲ್ಲಿ ನಂದಿನಿ ಹಾಲಿನ ಪೂರೈಕೆಯನ್ನು ಬಮೂಲ್ ಆರಂಭಿಸಿದೆ. ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿರುವ ಬಮೂಲ್‌ನ ಮೆಗಾ ಡೇರಿ ಘಟಕವು ಇಂತಹದ್ದೊಂದು ಪ್ರಯೋಗಕ್ಕೆ ಸಾಕ್ಷಿಯಾಗಿದ್ದು, ಇದು ದೇಶದಲ್ಲೇ ಮೊದಲು ಎನಿಸಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ಕನಿಷ್ಠ 500 ವರ್ಷ ಬೇಕು. ಆದರೆ, ಬಮೂಲ್ ಬಳಸಲು ಮುಂದಾಗಿರುವ ಬಯೋಡಿಗ್ರೇಡೆಬಲ್ ಪ್ಲಾಸ್ಟಿಕ್ ಕೇವಲ 6 ತಿಂಗಳಲ್ಲಿ ಕರಗಲಿದೆ. ಮಾತ್ರವಲ್ಲ, ಜೈವಿಕ ಗೊಬ್ಬರವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ ಎಂದು ಬಮೂಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿದೇಶಿ ತಂತ್ರಜ್ಞಾನ : ‘ಪಾಲಿಥಿನ್ ಹಾಲಿನ ಕವರ್‌ಗಳಿಗೆ ಪರ್ಯಾಯವಾಗಿ ಬಮೂಲ್ ಬಳಸುತ್ತಿರುವ ಬಯೋಡಿಗ್ರೇಡೆಬಲ್ ಪೊಟ್ಟಣಗಳು ವಿದೇಶಿ ತಂತ್ರಜ್ಞಾನ ಆಧರಿಸಿದ್ದು, ಜೋಳದ ಗಂಜಿಯಿಂದ(ಕಾರನ್ ಸ್ಟಾರ್ಚ್) ತಯಾರಾಗಿವೆ. ಸ್ಥಳೀಯ ಕಂಪನಿಯೇ ಕವರ್‌ಗಳನ್ನು ತಯಾರಿಸಿ ಒದಗಿಸಿದೆ’ ಎಂದು ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಟಿ.ಸುರೇಶ್ ‘ ತಿಳಿಸಿದರು.
‘ಜೂನ್ 5, ವಿಶ್ವ ಪರಿಸರ ದಿನದಿಂದ ಸುಮಾರು 120 ಬಯೋಡಿಗ್ರೇಡೆಬಲ್ ಪ್ಯಾಕೆಟ್‌ಗಳಲ್ಲಿ ಹಾಲು ಪೂರೈಸುತ್ತಿದ್ದೇವೆ. ಸೋರಿಕೆ ಅಥವಾ ಗುಣಮಟ್ಟದ ಸಮಸ್ಯೆಗಳು ವರದಿಯಾಗಿಲ್ಲ’ ಎಂದು ಬಮೂಲ್ ಮಾಜಿ ಅಧ್ಯಕ್ಷ ಎಚ್.ಪಿ. ರಾಜ್‌ಕುಮಾರ್ ಹೇಳಿದರು.
‘ಆರಂಭದಲ್ಲಿ ಒಂದು ತಿಂಗಳವರೆಗೆ ಎರಡು ಲಕ್ಷ ಬಯೋಡಿಗ್ರೇಡೆಬಲ್ ಕವರ್ಗಗಳನ್ನು ಬಳಸಿ ಹಾಲನ್ನು ಪ್ಯಾಕಿಂಗ್ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಕವರ್‌ಗಳು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ಕಡೆ ಬಳಸುವ ಅಲೋಚನೆ ಇದೆ’ ಎಂದು ಸುರೇಶ್ ಮಾಹಿತಿ ನೀಡಿದರು.
‘ಬಮೂಲ್ ನಿತ್ಯ 14 ಲಕ್ಷ ಲೀಟರ್ ಹಾಲು ಮತ್ತು ಮೊಸರು ಮಾರಾಟ ಮಾಡುತ್ತದೆ. ಅದರಲ್ಲಿ 200 ಎಂ.ಎಲ್.ನಿಂದ 1 ಲೀಟರ್‌ವರೆಗೆ ಹಾಲು-ಮೊಸರಿನ ಪ್ಯಾಕಿಂಗ್‌ಗೆ ನಿತ್ಯ ಸಮಾರು 20 ಲಕ್ಷ ಪ್ಲಾಸ್ಟಿಕ್ ಕವರ್ಗಗಳನ್ನು ಬಳಸುತ್ತಿತ್ತು. ಇನ್ನೂ ತ್ಯಾಜ್ಯ ನಿತ್ಯ ಪ್ರಕೃತಿ ಮಡಿಲು ಸೇರುತ್ತಿತ್ತು. ಇನ್ನು ಮುಂದೆ ಅದಕ್ಕೆ ಮುಕ್ತಿ ಸಿಗಲಿದೆ’ ಎಂದು ಬಮೂಲ್ ಮೂಲಗಳು ತಿಳಿಸಿವೆ.
ಇತ್ತೀಚಿನ ವರ್ಷಗಳಲ್ಲಿ ಡೇರಿ ಉದ್ಯಮದ ಕೆಲವು ಕಂಪನಿಗಳು, ಪ್ಲಾಸ್ಟಿಕ್ ಪೊಟ್ಟಣಗಳನ್ನು ಬದಲಾಯಿಸುವುದು ದುಬಾರಿ ಕೆಲಸ. ಇದು ಪ್ರಾಯೋಗಿಕವಾಗಿ ಅಸಾಧ್ಯ’ ಎಂದು ಹೇಳಿದ್ದವು. ‘ಬೆಲೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ’ ಎಂದು ಹೇಳಿರುವ ಬಮೂಲ್ ಅಧಿಕಾರಿಗಳು, ಶೇ 5ರಷ್ಟು ಬೆಲೆ ಹೆಚ್ಚಾಗಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸುವುದು ಕಷ್ಟವಾಗುತ್ತಿದ್ದು, ಪರ್ಯಾಯ ಪೊಟ್ಟಣಗಳನ್ನು ಬಳಸುವಂತೆ 2018ರಲ್ಲಿ ಕೆಎಂಎಫ್ ಅನ್ನು ಒತ್ತಾಯಿಸಿತ್ತು. ಆದರೆ, ಕೆಎಂಎಫ್ ಪ್ಲಾಸ್ಟಿಕ್ ಪೊಟ್ಟಣದಲ್ಲೇ ಹಾಲು ಪೂರೈಕೆಯನ್ನು ಮುಂದುವರಿಸಿತ್ತು.
ದೇಶದಲ್ಲೇ ಮೊದಲ ಬಾರಿಗೆ ಬಯೋ ಡಿಗ್ರೇಡೆಬಲ್ ಹಾಲಿನ ಪ್ಯಾಕೇಟ್‌ಗಳನ್ನು ಬಮೂಲ್ ಹೊಸದಾಗಿ ಬಿಡುಗಡೆ ಮಾಡಿದೆ. ವಿಶ್ವ ಪರಿಸರ ದಿನವನ್ನು ಆಚರಿಸಿದ ಸಂದರ್ಭದಲ್ಲೇ ಪ್ಲಾಸ್ಟಿಕ್ ಬಳಕೆ ತಡೆಗೆ ಬಮೂಲ್ ವಿನೂತನ ಹೆಜ್ಜೆ ಇಟ್ಟಿದೆ – ಡಿ.ಕೆ. ಸುರೇಶ್ ಬಮೂಲ್ ನಿರ್ದೇಶಕ