



ಕೊಣಾಜೆ: ಯುರೋಪಿಯನ್ ಒಕ್ಕೂಟವು ಭೌಗೋಳಿಕ ಪ್ರದೇಶದಲ್ಲಿ ಚಿಕ್ಕದಾಗಿದ್ದು, ಜಾಗತಿಕ ಜನಸಂಖ್ಯೆಯನ್ನು ಶೇ 5.9% ಹೊಂದಿದ್ದು, ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ದ್ವೀತಿಯ ಸ್ಥಾನವನ್ನು ಹೊಂದುವುದರ ಮೂಲಕ ಭಾರತ ಸೇರಿದಂತೆ ಜಾಗತಿಕ ರಾಷ್ಟ್ರಗಳೊಂದಿಗೆ ಉತ್ತಮ ಆರ್ಥಿಕತೆ ಸಹಕಾರ ಮತ್ತು ಸಹಭಾಗಿತ್ವವನ್ನು ಹೊಂದಿದೆ ಎಂದು ಸ್ಪೇನ್ ನ ಮಾಜಿ ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರಾದ ಜೋರ್ಡಿ ಸೋಲೆ ಫರ್ನಾಂಡೊ ಅವರು ಹೇಳಿದರು.
ಅವರು ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದಲ್ಲಿ “ಭೌಗೋಳಿಕ ರಾಜಕೀಯ ವ್ಯವಸ್ಥೆಯಲ್ಲಿ ಯುರೋಪಿಯನ್ ಒಕ್ಕೂಟದ ಕ್ರಮ, ಸವಾಲುಗಳು, ಕಾರ್ಯತಂತ್ರಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಸಂಘರ್ಷ ನಿವಾರಣೆಗೆ ಸಾಮಾನ್ಯ ವಿದೇಶಾಂಗ ಮತ್ತು ಭದ್ರತಾ ನೀತಿಯನ್ನು ರೂಪಿಸಿಕೊಂಡಿದೆ. ಇದರ ಮೂಲಕ ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಾಗುವ ಸಂಘರ್ಷಗಳನ್ನು ತಡೆದು ಶಾಂತಿಯನ್ನು ರೂಪಿಸುವುದರ ಮೂಲಕ ಮಾನವೀಯ ನೆರವನ್ನು ನೀಡುತ್ತಿದೆ. ಪ್ರಸ್ತುತದಲ್ಲಿ ಯುರೋಪಿಯನ್ ಒಕ್ಕೂಟವು 24 ಮಿಲಿಟರಿ ಮತ್ತು ನಾಗರಿಕ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದು ಜಾಗತಿಕ ಮಟ್ಟದಲ್ಲಿ ಒಂದು ಮೌಲ್ಯಧಾರಿತ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆಯೇ ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಕಾರ್ಯಚರಣೆಯಲ್ಲಿ ತೊಡಗಿಸಿಕೊಳ್ಳಲು ತನ್ನ 27 ಸದಸ್ಯ ರಾಷ್ಟ್ರಗಳ ಸರ್ವಾನುಮತ ನಿರ್ಣಯ ಅಗತ್ಯವಾಗಿದ್ದು ಮಿಲಿಟರಿ ಕಾರ್ಯಚರಣೆಯಲ್ಲಿ ತೊಡಗಿಸಿಕೊಳ್ಳಲು ಸದಸ್ಯ ರಾಷ್ಟ್ರಗಳ ಮಿಲಿಟರಿ ನೆರೆವು ಅಥವಾ ನ್ಯಾಟೋನ ಬೆಂಬಲವನ್ನು ಪಡೆದುಕೊಂಡು ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಶಾಂತಿಯನ್ನು ರೂಪಿಸಿ ಪ್ರಜಾಪ್ರಭುತ್ವದ ರಕ್ಷಣೆ ಮಾಡುವುದರ ಜೊತೆಗೆ ಯುರೋಪಿಯನ್ ಒಕ್ಕೂಟ ಸದಸ್ಯ ರಾ಼ಷ್ಟ್ರಗಳ ಜನರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ. ಜಯರಾಜ್ ಅಮೀನ್ ಅವರು, ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಪ್ರಬಲವಾದ ಅರ್ಥಿಕತೆಯನ್ನು ಹೊಂದಿ ರಾಜಕೀಯ ಕ್ಷೇತ್ರದಲ್ಲಿ ಅಂದರೆ ಮಿಲಿಟರಿ ಕ್ಷೇತ್ರದಲ್ಲಿ ಸೀಮಿತವಾದ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದೆ. ಅರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯವನ್ನು ಸಾಧಿಸಿ ಸಂಘರ್ಷ ನಿವಾರಣೆಯಲ್ಲಿ ತನ್ನದೇ ಆದ ಮಹತ್ವವನ್ನು ಕಂಡುಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .
ಕಾರ್ಯಕ್ರಮದಲ್ಲಿ ಡಾ. ವೆಂಕಟೇಶ್ ಹೆಚ್ ಎಸ್, ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು. ಲೀನ್ ಕಾರ್ಯಕ್ರಮ ನಿರೂಪಿಸಿದರು. ಹಾಗೂ ವರೆಣ್ಯಾನಾಯಕ್ ಸ್ವಾಗತಿಸಿದರು ಮತ್ತು ಡಾ. ಸಿ.ಎಮ್. ರಾಜ್ ಪ್ರವೀಣ್ ವಂದಿಸಿದರು.