ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ವೈದ್ಯಕೀಯ ಸೇವೆಯಲ್ಲಿರುವ ಯುವಸಮುದಾಯ ವೇಗವಾಗಿ ಹಣಗಳಿಸುವಲ್ಲಿ ನಿರತವಾಗಿದ್ದು, ತಾಳ್ಮೆ, ಅನುಭವ, ಪರಿಣತಿಯೊಂದಿಗೆ ಹೆಚ್ಚಿನ ಸಮಯ ಪಡೆದು ವೃತ್ತಿಯಲ್ಲಿ ತೊಡಗಿಕೊಂಡಲ್ಲಿ ಯಶಸ್ವಿ ವೈದ್ಯರಾಗಲು ಸಾಧ್ಯ ಎಂದು ಬೆಂಗಳೂರಿನ ಖ್ಯಾತ ಕರ್ಣತಜ್ಞ ಡಾ.ಹೆಚ್.ವಿಜಯೇಂದ್ರ ಅಭಿಪ್ರಾಯಪಟ್ಟರು
ಹಿಂದೆ ಸ್ನಾತಕೋತ್ತರ ವಿಭಾಗದ ವೈದ್ಯರಿಗೆ ಮೈಕ್ರೋಸ್ಕೋಪ್ ಮುಟ್ಟಲು ಬಿಡುತ್ತಿರಲಿಲ್ಲ. ಆದರೆ 1987ರಲ್ಲಿ ಪ್ರಥಮ ಬಾರಿ ಶಸ್ತ್ರಚಿಕಿತ್ಸೆ ನೇರಪ್ರಸಾರ ಕಾರ್ಯಗಾರ ಆರಂಭದಿಂದಾಗಿ ಕ್ಷೇತ್ರದಲ್ಲಿ ಬಹಳ ಅನುಭವ ಪಡೆಯುವಂತಾಯಿತು. ಸದ್ಯ ಪ್ರತೀ ವಾರದಲ್ಲಿ ಇಂತಹ ಶಸ್ತ್ರಚಿಕಿತ್ಸಾ ಕಾರ್ಯಗಾರಗಳು ನಿರಂತರವಾಗಿ ನಡೆಯುತ್ತಿದೆ. ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಯುವವೈದ್ಯರು ಹಣದ ಹಿಂದೆ ಹೋಗದೇ, ಪರಿಣತಿ, ಉತ್ಸಾಹ, ಆನಂದ ಭಾವದೊಂದಿಗೆ ವೃತ್ತಿಯನ್ನು ನಿರ್ವಹಿಸುವ ಮೂಲಕ ಯಶಸ್ವಿ ವೈದ್ಯರಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿ.ವಿ ಹಣಕಾಸು ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೋಯ ಮಾತನಾಡಿ ಆಧುನಿಕ ತಂತ್ರಜ್ಞಾನದ ವೈದ್ಯರು ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸಲು ಯೆನೆಪೋಯ ವಿ.ವಿ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ಕಾರ್ಯಗಾರಗಳಿಂದ ವೈದ್ಯ ಸಮುದಾಯ ಹೆಚ್ಚಿನ ಜ್ಞಾನ ಸಂಪಾದಿಸಲು ಸಾಧ್ಯ ಎಂದರು.
ಬೆಂಗಳೂರಿನ ಖ್ಯಾತ ಇಎನ್‍ಟಿ ಸರ್ಜನ್ ಡಾ.ದೀಪಕ್ ಹಲ್ದೀಪುರ್ ಮಾತನಾಡಿ ವೈದ್ಯರು ಇಂಜಿನಿಯರ್ ಗಳಿಗೆ ಧನ್ಯತಾ ಭಾವವನ್ನು ವ್ಯಕ್ತಪಡಿಸುವ ಕಾಲ ಇದಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ನೂತನ ತಂತ್ರಜ್ಞಾನಗಳನ್ನು ತರಲು ಅವರ ಶ್ರಮ ಬಹಳಷ್ಟಿದೆ ಎಂದರು.
ಯೆನೆಪೋಯ ವಿ.ವಿ ಕುಲಸಚಿವ ಡಾ.ಶ್ರೀಕುಮಾರ್ ಮೆನನ್, ಯೆನೆಪೋಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ಗುಲಾಂ ಜೀಲಾನಿ ಖಾದಿರಿ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮ ಸಂಘಟಕ ಡಾ.ಗಂಗಾಧರ ಸೋಮಯಾಜಿ ಕೆ.ಯಸ್ ಸ್ವಾಗತಿಸಿದರು. ಡಾ.ವಿಜಯಲಕ್ಷ್ಮೀ ವಂದಿಸಿದರು.