Site icon Ullalavani

ಸಾವಿನ ಭವಿಷ್ಯ ನುಡಿಯುತ್ತಿದ್ದ ಜೀವನ ವಿಜಯಾನಂದ ಗುರೂಜಿ ಇನ್ನಿಲ್ಲ

ಸೋಮೇಶ್ವರ: ಸಾವಿರಾರು ಜನರ ಭವಿಷ್ಯ ಮತ್ತು ಸಾವಿನ ಭವಿಷ್ಯ ಹೇಳಿ ರಾಜ್ಯಾದ್ಯಂತ ಖ್ಯಾತಿ ಗಳಿಸಿದ್ದ ಮೂಲತ: ಮಂಗಳೂರಿನ ಬಜಾಲ್ ನಿವಾಸಿ ಉಳ್ಳಾಲ ಸೋಮೇಶ್ವರದಲ್ಲಿ ನೆಲೆಸಿದ್ದ ಜೀವನ್ ವಿಜಯಾನಂದ ಗುರೂಜಿ (ವಿಜಯ)(47) ಮಂಗಳವಾರ ಬೆಳಿಗ್ಗೆ 11.00 ತೊಕ್ಕೊಟ್ಟು ಖಾಸಗಿ ಆಸ್ಪತ್ರೆ ನಿಧನ ಹೊಂದಿದ್ದಾರೆ.

ದೀರ್ಘ ಕಾಲದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದ್ದಾರೆ. ಗುರೂಜಿ ಪವಾಡಗಳ ಬಗ್ಗೆ ತಿಳಿದಿದ್ದ ರಾಜ್ಯದ ಜನ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಗುರೂಜಿಯವರ ಸೋಮೇಶ್ವರದ ನಿವಾಸಕ್ಕೆ ಬರುತ್ತಿದ್ದರು. ಯಾವುದೇ ಫಲಾಪೇಕ್ಷೆಯೇ ಇಲ್ಲದೇ ಜನರ ಭವಿಷ್ಯ ನುಡಿಯುತ್ತಿದ್ದರು. ಪತ್ನಿ ಮತ್ತು ಮಕ್ಕಳಿದ್ದರೂ ಹತ್ತು ವರ್ಷಗಳ ಹಿಂದೆಯೇ ತನ್ನ ಕುಟುಂಬ ತ್ಯಜಿಸಿ ಸೋಮೇಶ್ವರಕ್ಕೆ ಬಂದಿದ್ದರು.
ಈ ವೇಳೆ ಸ್ಮಶಾನದಲ್ಲಿ ಗುರೂಜಿಗೆ ವಿಶೇಷ ಶಕ್ತಿಯೊಂದು ಅವಾಹನೆಯಾದ ಪರಿಣಾಮ ಅವರು ಹೇಳುತ್ತಿದ್ದ ವಿಚಾರಗಳೆಲ್ಲಾ ನಿಜವಾಗುತಿತ್ತು. ಹೀಗಾಗಿ ಸುತ್ತಮುತ್ತಲಿನ ಜನ ಗುರೂಜಿ ಬಳಿ ಭವಿಷ್ಯ ಕೇಳಲು ಆರಂಭಿಸಿದ್ದರು.

ಸುಮಾರು 78 ಮಂದಿಯ ಸಾವಿನ ದಿನಾಂಕವನ್ನು ನಿಖರವಾಗಿ ತಿಳಿಸಿದ್ದರು. ಕಳೆದ ಒಂದು ವಾರದಿಂದ ಆರೋಗ್ಯದಲ್ಲಿ ಏರುಪೇರಾಗಿ ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆಂದು ಸಂಬಂಧಿ ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್ ತಿಳಿಸಿದ್ದಾರೆ.

ಅವರ ಪಾರ್ಥೀವ ಶರೀರವನ್ನು ಸೋಮೇಶ್ವರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಕುಟುಂಬಸ್ಥರು ಸೇರಿದಂತೆ ಹೊರ ಮುಂಬೈ, ದೆಹಲಿ ಮತ್ತು ಹೊರ ರಾಜ್ಯದಲ್ಲಿರೋ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಅ.5ರ ಬೆಳಿಗ್ಗೆ 10.00 ಗಂಟೆಯವರೆಗೆ ಸೋಮೇಶ್ವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗುರೂಜಿ ಆಶಯದಂತೆ ಬಂಟ್ವಾಳ ತಾಲೂಕಿನ ವಾಮದಪದವು ಎಂಬಲ್ಲಿ ಸಮಾಧಿ ಮಾಡಲೆಂದೇ ಅವರು ಖರೀದಿಸಿರುವ ಜಾಗದಲ್ಲಿ ಸಮಾಧಿ ನಡೆಸಲು ಭಕ್ತರು ಮುಂದಾಗಿದ್ದಾರೆ.

ಸಾವಿನ ದಿನಾಂಕವನ್ನು ಬರೆದಿಟ್ಟಿದ್ದಾರೆ !
ತನ್ನ ಸಾವಿನ ದಿನಾಂಕವನ್ನು ಕೂಡಾ ಗುರೂಜಿ ಬರೆದಿಟ್ಟಿದ್ದಾರೆ. ಈ ಬಗ್ಗೆ ಹುಡುಕಾಟವನ್ನು ಹಿತೈಷಿಗಳು ಆರಂಭಿಸಿದ್ದಾರೆ. ಆಸ್ಪತ್ರೆ ಸೇರುವ ಕೆಲ ದಿನಗಳ ಹಿಂದೆ ಕೂಡಾ ಅವರ ನಿವಾಸಕ್ಕೆ ಭೇಟಿ ನೀಡಿದವರಲ್ಲಿ ತನ್ನ ಸಾವು ಸಮೀಪಿಸುತ್ತಿರುವ ವಿಚಾರವನ್ನು ತಿಳಿಸಿದ್ದು, ತನ್ನ ಇಚ್ಛೆಯಂತೆ ಸಮಾಧಿ ನಡೆಸಬೇಕೆಂದು ತಿಳಿಸಿರುವುದನ್ನು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

Exit mobile version