Site icon Ullalavani

ಸರ್ಕಾರದ ತಾಕತ್ತಿಗೆ ಬೋಳಿಯಾರ್ ಸವಾಲ್!

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಬಲಿದಾನ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರಪ್ರೇಮದ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ರಾಜಕೀಯದ ಬಣ್ಣ ಬಳಿಯುತ್ತಿದೆ. ಅಲ್ಲದೇ ತಿರಂಗ ಯಾತ್ರೆಗೆ ಸಭಾಂಗಣ ಒದಗಿಸಿದ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದೆ. ತಾಕತ್ತಿದರೆ ವಿವಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸವಾಲು ಹಾಕಿದ್ದಾರೆ.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ದೇಶದ್ರೋಹಿ ಧೋರಣೆ ಮತ್ತು ಅದನ್ನು ಸಮರ್ಥಿಸಿದ ರಾಜ್ಯ ಸರಕಾರದ ವಿರುದ್ಧ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಾತಂತ್ರ್ಯೋತ್ಸವಕ್ಕಾಗಿ ಹೋರಾಡಿದವರನ್ನು ಸ್ಮರಿಸುವ ಸಲುವಾಗಿ ರಾಷ್ಟ್ರಪ್ರೇಮದ ಕಾರ್ಯಕ್ರಮವಾಗಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅದನ್ನೇ ರಾಜಕೀಯ ಕಾರ್ಯಕ್ರಮ ಎಂದು ಬಣ್ಣಿಸಿ, ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳನ್ನು ಬೆಂಬಲಿಸುವ ಕಾಂಗ್ರೆಸ್‍ನ ಮನಸ್ಥಿತಿ ಯಾವ ರೀತಿಯಲ್ಲಿದೆ ಅನ್ನುವುದು ಗೊತ್ತಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಮಿತ್ ಷಾ ನೇತೃತ್ವದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಪ್ರೇಮದ ಸಂಕೇತವಾಗಿರುವ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವೆಂದು ರಾಜ್ಯ ಸರಕಾರ ಬಣ್ಣ ಬಳಿಯಲು ಯತ್ನಿಸುತ್ತಿದೆ. ಅಲ್ಲದೆ ಸ್ಥಳ ಒದಗಿಸಿದಂತಹ ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ರಾಜ್ಯ ಸರಕಾರ ತಾಕತ್ ಇದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯದ ಗೃಹಸಚಿವ ಪರಮೇಶ್ವರ್ ಕಾಲೇಜಿನಲ್ಲೇ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿದೆ ಆದರೂ ಸಂಬಂಧಪಟ್ಟ ರಾಜ್ಯ ಸರಕಾರ ಕ್ರಮಕೈಗೊಳ್ಳದೇ ದೇಶವಿರೋಧಿಗಳೊಂದಿಗೆ ಕೈಜೋಡಿಸಿಕೊಂಡಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಸರಕಾರ ಭಯೋತ್ಪಾದಕರನ್ನು ದೇಶ ಪ್ರವೇಶಿಸಲು ಕುಮ್ಮಕ್ಕು ನೀಡಲಾಗುತ್ತಿದೆ. ಬಲೂಚಿಸ್ತಾನದಲ್ಲಿ ನರಮೇಧಗಳಾಗುತ್ತಿದ್ದರೂ ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ. ಪ್ರಧಾನಿ ಪಾಕಿಸ್ತಾನಕ್ಕೆ ಹೋಗಲು ಮಾಜಿ ಸಂಸದೆ ರಮ್ಯಾ ಹೋಗುವಲ್ಲಿ ವ್ಯತ್ಯಾಸಗಳಿವೆ. ಅದನ್ನು ಸಚಿವ ಖಾದರ್ ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ . ಮಕ್ಕಳಾಟಿಕೆಯಾಗಿ ಮಾತನಾಡದಿರಿ. ಗೌರವ, ರಕ್ಷಣೆ ದೃಷ್ಟಿಯಲ್ಲಿ ವಿಶ್ವಾದ್ಯಂತ ಪ್ರಧಾನಿ ಹೋಗುತ್ತಿರುವುದರಿಂದ ಭಾರತ ಐದನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ನಾಲಾಯಕ್ ಸರಕಾರ, ಅಮ್ನೇಸ್ಟಿಯಾ ದೇಶವಿರೋಧಿ ಸಂಸ್ಥೆ ಕುರಿತು ಗೃಹಸಚಿವ ಪರಮೇಶ್ವರ್ ಶೀಘ್ರವೇ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು. ಶೀಘ್ರವೇ ಅಮ್ನೇಸ್ಟಿಯಾವನ್ನು ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಅಂತಾರಾಷ್ಟ್ರೀಯ ಕುಖ್ಯಾತ ಸಂಸ್ಥೆಯನ್ನು ಹುಟ್ಟಿಹಾಕಿ ಯುವಜನತೆಯ ಮೇಲೆ ರಾಷ್ಟ್ರವಿರೋಧಿ ಭಾವನೆಯನ್ನು ಮೂಡಿಸುವಂತವರಿಗೆ ಬೆಂಬಲ ನೀಡುತ್ತಿರುವ ರಾಜ್ಯ ಸರಕಾರಕ್ಕೆ ಆಡಳಿತ ನಡೆಸುವ ಯಾವುದೇ ನೈತಿಕತೆ ಇಲ್ಲ. ದೇಶ ರಕ್ಷಣೆ ಮಾಡುವ ಸೈನಿಕರ ವಿರುದ್ಧವೇ ಘೋಷಣೆ ಕೂಗುವ ದೇಶವಿರೋಧಿ ಸಂಘಟನೆಯನ್ನು ಮೊದಲಿಗೆ ದೇಶದಿಂದ ಹೊರದಬ್ಬಲು ಪಕ್ಷಬೇಧ ಮರೆತು ಎಲ್ಲರೂ ಹೋರಾಡಬೇಕಿದೆ. ಈ ನಡುವೆ ರಾಜ್ಯ ಸರಕಾರ ಮಹಿಳೆಯರಿಗೆ ಆತ್ಮಹತ್ಯೆ ಭಾಗ್ಯ, ವಿಧವೆ ಭಾಗ್ಯವನ್ನು ನೀಡುವಲ್ಲಿ ಸಕ್ರಿಯವಾಗಿದೆ ಎಂದರು.
ಈ ಸಂದರ್ಭ ಉಳ್ಳಾಲ ನಗರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ದೇಶದ್ರೋಹದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು, ದೇಶವಿರೋಧಿ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಸವಾಲು ಹಾಕುತ್ತಿರುವ ಕುರಿತು ಸಾರ್ವಜನಿಕವಾಗಿ ಮೂಡಿರುವ ಆತಂಕವನ್ನು ದೂರ ಮಾಡಬೇಕು, ಅಮಾಯಕ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಲ್ಪಸಂಖಾಯತರ ಜಿಲ್ಲಾ ಕಾರ್ಯದರ್ಶಿ ಮುನೀರ್ ಬಾವಾ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ದೇವದಾಸ್ ಕೊಲ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಜೇಶ್ ಶೆಟ್ಟಿ ಫಜೀರು, ಭರತ್ ಉಳ್ಳಾಲ, ಸುಜಿತ್ ಮಾಡೂರು, ವಿಠಲ ಸಾಲ್ಯಾನ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಸುಂದರ್, ಪ್ರಧಾನ ಕಾರ್ಯದರ್ಶಿ ಎ.ಮನೋಜ್ ಆಚಾರ್ಯ ನಾಣ್ಯ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ.ಆರ್, ಗಣೇಶ್ ಪ್ರಸಾದ್, ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Exit mobile version