ಉಳ್ಳಾಲ್ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವರಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್ ದಿಟ್ಟ ನಿಲುವು ತೆಗೆದುಕೊಂಡ ಹಿನ್ನಲೆಯಲ್ಲಿ ನಮ್ಮ ದೇಶ ಇಷ್ಟು ಉಳಿದಿದ್ದು, ನೆಹರೂ ಮಾತು ಕೇಳುತ್ತಿದ್ದರೆ ಭಾರತ ಇನ್ನಷ್ಟು ಛಿದ್ರವಾಗಿ ಹೋಗುತ್ತಿತ್ತು ಎಂದು ವಿಶ್ವಹಿಂದೂ ಪರಿಷತ್‍ನ ವಿಭಾಗ ಸಹ ಕಾರ್ಯದರ್ಶಿ ಪ್ರಕಾಶ್ ಮಲ್ಪೆ ಅಭಿಪ್ರಾಯಪಟ್ಟರು.
ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡದ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆಯ ಸಮಾರೋಪ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಬಾರತದ ಪ್ರಥಮ ಪ್ರಧಾನ ಮಂತ್ರಿಯಾಗುವ ನಿಟ್ಟಿನಲ್ಲಿ ನೆಹರೂರವರು ದೇಶದ ವಿಭಜನೆಗೆ ಮೂಲ ಕಾರಣರಾದರು. ಸ್ವತಂತ್ರ ಭಾರತದ ಪೂರ್ವದಲ್ಲಿ ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿತ್ತು. ಆದರೆ ಮುಸ್ಲಿಂರ ಓಲೈಕೆಗಾಗಿ ಧರ್ಮಕ್ಕೊಂದು ಬಣ್ಣ ನೀಡಿ ರಾಷ್ಟ್ರ ಧ್ವಜವನ್ನು ತುಂಡು ಮಾಡಲಾಯಿತು. ರಘುಪತಿ ರಾಘವ ಹಾಡಿನಲ್ಲಿ ಅಲ್ಲಾನನ್ನು ಸೇರಿಸಲಾಯಿತು. ಯಾವ ಹಾಡು ಸ್ವತಂತ್ರಯದ ರಣಕಹಳೆಗೆ ಸ್ಪೂರ್ತಿಯಾಗಿತ್ತೋ ಅಂತಹ ವಂದೇ ಮಾತರಂ ಹಾಡನ್ನು ಹಾಡಬಾರದು ಎನ್ನುವ ನಿಟ್ಟಿನಲ್ಲಿ ಚಿಂತನೆ ನಡೆಯಿತು. ಭಾರತ ವಿಭಜನೆಯಾಗುತ್ತದೆ ಎಂದು ಗೊತ್ತಿದ್ದರೂ ನೆಹರೂರವರು ಈಗಿನ ಪಾಕಿಸ್ಥಾನದ ಲಾಹೋರ್‍ನಲ್ಲಿ ಭಾಷಣ ಮಾಡಿ ಭಾರತ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಕರೆ ನೀಡಿದ ಕೆಲವೇ ದಿನಗಳಲ್ಲಿ ಅ„ಕಾರದ ಲಾಲಸೆಗಾಗಿ ಭಾರತ ಮತ್ತು ಪಾಕಿಸ್ಥಾನ ವಿಭಜನೆಗೆ ಮೂಲ ಕಾರಣರಾದರು. ನೆಹರೂರವರು ವಿಭಜನೆಯಾದ ಭಾರತಕ್ಕೆ ಪ್ರದಾನಿಯಾದರೆ, ಭಾರತದಿಂದ ಬೇರ್ಪಟ್ಟ ಪಾಕಿಸ್ಥಾನಕ್ಕೆ ಮಹಮ್ಮದ್ ಆಲಿ ಜಿನ್ನಾ ಪ್ರಧಾನಿಯಾದರು. ಭಾರತದ ಸ್ವಾತಂತ್ರದ ಬಳಿಕ ದೇಶದೊಳಗಿನ ದಂಗೆಯನ್ನು ಅಂದಿನ ಪ್ರಥಮ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ತೆಗೆದುಕೊಂಡ ಕಠಿಣ ನಿಲುವಿನಿಂದ ಇಂದಿನ ಭಾರತ ಕಾಣಲು ಸಾಧ್ಯವಾಗಿದೆ ಎಂದರು.
ನಿವೃತ್ತ ಸೇನಾನಿ ಅನಿಲ್ ಕುಮಾರ್ ಕುಂಪಲ ಅಧ್ಯಕ್ಷತೆ ವಹಿಸಿ ದೇಶ ಸೇವೆಗೆ ಎಲ್ಲರೂ ಕಟಿಬದ್ಧರಾಗಬೇಕು. ವಿದ್ಯಾರ್ಥಿಗಳು, ಯುವ ಜನರು ಸೇನೆಗೆ ಸೇರುವ ಮೂಲಕ ತಮ್ಮ ದೇಶ ಸೇವೆಯನ್ನು ಮಾಡಬಹುದು ಎಂದರು.
ಅಂಬಿಕಾರೋಡ್‍ನ ಗಟ್ಟಿ ಸಮಾಜಭವನದಿಂದ ಪಂಜಿನಮೆರವಣಿಗೆಯು ತೊಕ್ಕೊಟ್ಟು ಬಸ್ ಸ್ಟ್ಯಾಂಡ್‍ವರೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನಡೆಸಲಿದ್ದು, ವಿಶ್ವಹಿಂದೂ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ವಿಶ್ವಹಿಂದೂ ಪರಿಷತ್‍ನ ಉಳ್ಳಾಲ ಪ್ರಖಂಡ ಅಧ್ಯಕ್ಷ ಹರಿದಾಸ್ ಮಾಡೂರು, ಭಜರಂಗದಳದ ಉಳ್ಳಾಲ ಪ್ರಖಂಡ ಸಂಚಾಲಕ ಪವಿತ್ರ ಕೆರೆಬೈಲು, ಭಜರಂಗ ದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್, ಗುರುಪ್ರಸಾದ್ ಉಳ್ಳಾಲ ಉಪಸ್ಥಿತರಿದ್ದರು.
ಆರ್. ಎಸ್.ಎಸ್ ನ ಆಶಿತ್ ಮಾಡೂರು ಕಾರ್ಯಕ್ರಮ ನಿರೂಪಿಸಿದರು. ವಿ.ಹಿಂ.ಪ ಮುಖಂಡ ನಾರಾಯಣ ಕುಂಪಲ ಸ್ವಾಗತಿಸಿದರು.
ರವಿ ಅಸೈಗೋಳಿ ವಂದಿಸಿದರು.ಕಾರ್ಯಧ್ಯಕ್ಷ ಪದ್ಮನಾಭ ಮರ್ಕೆದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಂಬಿಕಾರೋಡ್‍ನಗಟ್ಟಿ ಸಮಾಜ ಭವನದಿಂದ ತೊಕ್ಕೊಟ್ಟು ಬಸ್ ನಿಲ್ದಾಣದವರೆಗೆ ಪಂಜಿನ ಮೆರವಣಿಗೆ ನಡೆಯಿತು.