ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹರೇಕಳ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹಾಜಬ್ಬರ ಶಾಲೆ ಮುಚ್ಚಿಸುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಹೆಸರಿನಲ್ಲಿ ಹರೇಕಳದ ಸರ್ಕಾರಿ ಶಾಲೆ ಮುಚ್ಚಿಸಲು ಸರ್ಕಾರ ಹೊರಟಿದೆ ಎಂದು ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಆರೋಪಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದೇಶ ವಿರೋಧಿಸಿ ಹರೇಕಳದ ಹಿರಿಯ ಪ್ರಾಥಮಿಕ ಶಾಲೆಯಲ್ಕಿ ಎಸ್ ಎಫ್ ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಶಾಲೆಗೆ ಐತಿಹಾಸಿಕ ಹಿನ್ನಲೆಯಿದ್ದು, ಕಿತ್ತಳೆ ಹಣ್ಣಿನ ವ್ಯಾಪಾರಿಯಾಗಿದ್ದ ಹರೇಕಳ ಹಾಜಬ್ಬರು ನ್ಯೂ ಪಡ್ಪು ಸರ್ಕಾರಿ ಶಾಲೆಯನ್ನು ಸ್ಥಾಪಿಸಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸದೇ ಎಲ್ಲರಿಗೂ ಉಚಿತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಶಾಲೆ ಆರಂಭಿಸಿದ್ದರು. ಆದರೆ ಸರ್ಕಾರ ಶಿಕ್ಷಕಿಯನ್ನು ವರ್ಗಾಯಿಸುವ ಮೂಲಕ ಶಾಲೆಯನ್ನು ಮುಚ್ಚಲು ಹೊರಟಿದೆ. ಆದ್ದರಿಂದ ಹಾಜಬ್ಬರಿಗಿರುವ ಕಾಳಜಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ನ್ಯೂ ಪಡ್ಪು ಜಂಕ್ಷನ್‍ನಲ್ಲಿ ರಸ್ತೆ ತಡೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಶಿಕ್ಷಣ ಇಲಾಖೆಯ ಅಧಿಕಾರಿ ಮನವಿ ಪತ್ರ ಸ್ವೀಕರಿಸಿದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಡಿ.ವೈ.ಎಫ್.ಐ ಜಿಲ್ಲಾ ಉಪಾಧ್ಯಕ್ಷರಾದ ರಫೀಕ್ ಹರೇಕಳ, ಪಂಚಾಯತ್ ಸದಸ್ಯರಾದ ಹನೀಫ್, ಡಿ.ವೈ.ಎಫ್.ಐ ಮುಖಂಡರಾದ ಎವರೀಸ್ ಕುಟಿನ್ಹಾ, ಸಿದ್ದಿಕ್, ಖಾಲಿದ್,ಎಸ್.ಡಿ.ಎಂ.ಸಿ ಸದಸ್ಯರಾದ ಶೋಭಾ, ಪ್ರೇಮ, ನಸೀಮ, ಅಸ್ಮ ಮತ್ತು ಮಹಮ್ಮದ್ ಮಂತಾದವರು ವಹಿಸಿದ್ದರು.