Site icon Ullalavani

ಉಳ್ಳಾಲ ಹಾಡಹಗಲೇ ಯುವಕನ ಕೊಲೆ ಯತ್ನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಯುವಕನೋರ್ವನ ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಹಾಡಹಗಲೇ ನಡೆದಿದ್ದು, ಮೂವರ ತಂಡದಿಂದ ಕೃತ್ಯ ನಡೆದು ಆರೋಪಿಯೋರ್ವನ ತಂದೆಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಳೇಕಲ ನಿವಾಸಿ ನಾಸೀರ್ ಎಂಬವರ ಪುತ್ರ ಮಹಮ್ಮದ್ ಖಮಾಲುದ್ದೀನ್ (25)  ಕೊಲೆ ಯತ್ನಕ್ಕೆ ಒಳಗಾದವರು.  ಮಾಸ್ತಿಕಟ್ಟೆಯ ಬೀಫ್ ಸ್ಟಾಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ   ಉಳ್ಳಾಲ ನಿವಾಸಿಗಳಾದ ಅರ್ಫಾನ್, ಮಿತ್ತ ನಿಸಾರ್ ಹಾಗೂ ಜಾಫರ್ ಎಂಬವರ ತಂಡ ಏಕಾಏಕಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿತ್ತು. ಬಳಿಕ   ಖಮಾಲುದ್ದೀನ್ ಅವರಿಗೆ ಚೂರಿ,   ಸೋಡಾ ಬಾಟಲಿ ಹಾಗೂ ರಾಡಿನಿಂದ ಗಂಭೀರವಾಗಿ ಹಲ್ಲೆ ನಡೆಸಿ ಪರಾರಿಯಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಖಮಾಲುದ್ದೀನ್   ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     ತಿಂಗಳ ಹಿಂದೆ  ದರೋಡೆ ನಡೆಸಿದ್ದ ತಂಡ :  

ರಂಝಾನ್ ಉಪವಾಸದ ಸಂದರ್ಭ ಅರ್ಫಾನ್, ನಿಸಾರ್, ಜಾಫರ್ ಸೇರಿದಂತೆ ಮುಖ್ತಾರ್  ಎಂಬವರ ತಂಡ  ಇದೇ ಮಾಸ್ತಿಕಟ್ಟೆಯ ಬೀಫ್ ಸ್ಟಾಲಿಗೆ ನುಗ್ಗಿ  ಖಮಾಲುದ್ದೀನ್ ಅವರಿಗೆ ಹಲ್ಲೆ ನಡೆಸಿ  ರೂ.12,000 ಹಣ ದರೋಡೆಗೈದಿದ್ದರು.  ಈ ಬಗ್ಗೆ ಖಮಾಲುದ್ದೀನ್ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ  ಉಳ್ಳಾಲ ಪೊಲೀಸರು ಮುಖ್ತಾರ್ ಎಂಬಾತನನ್ನು ಬಂಧಿಸಿದ್ದರು.  ಈಗಲೂ ಆತ ಜೈಲಿನಲ್ಲಿದ್ದಾನೆ.

ಇದರಿಂದ ಕೆರಳಿದ ತಂಡ ನಿರಂತರವಾಗಿ ಖಮಾಲುದ್ದೀನ್ ಗೆ ದೂರು ಹಿಂಪಡೆಯುವಂತೆ  ಬೆದರಿಕೆ ಹಾಕುತಿತ್ತು.  ಅಲ್ಲದೆ ಆರೋಪಿಗಳ ಪೈಕಿ ಅರ್ಫಾನ್ ಎಂಬಾತನ ತಂದೆ ಜಲ್ದೀ ಸಿದ್ಧೀಕ್ ಎಂಬಾತನೂ  ಕರೆ ಮಾಡಿ ` ಉಳ್ಳಾಲಕ್ಕೆ ನಾನೇ ಡಾನ್, ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ.  ಕೇಸು ಹಿಂಪಡೆಯದಿದ್ದಲ್ಲಿ ಎರಡು ದಿನಗಳಲ್ಲಿ ಹೆಣ ಉರುಳಿಸುವುದಾಗಿ’  ಬೆದರಿಕೆಯೊಡ್ಡಿದ್ದ. ಈ ಕುರಿತು  ಖಮಾಲುದ್ದೀನ್  ಮೌಖಿಕವಾಗಿ ದೂರು ನೀಡಿದ್ದರು.  ಬುಧವಾರ  ಹಾಡಹಗಲೇ  ತಂಡ ಕೊಲೆಗೆ ಯತ್ನಿಸಿದೆ.

ಜಲ್ದೀ ಸಿದ್ಧೀಕ್ ವಶಕ್ಕೆ: ಗಂಭೀರ ಗಾಯಗೊಂಡ ಖಮಾಲುದ್ದೀನ್‍ನನ್ನು ತೊಕ್ಕೊಟ್ಟು   ಆಸ್ಪತ್ರೆಗೆ ದಾಖಲಿಸುವ ಸಂದರ್ಭ, ಅಲ್ಲಿಗೂ ಜಲ್ದೀ ಸಿದ್ಧೀಕ್ ಮತ್ತು  ತಂಡ  ಬಂದಿತ್ತು. ಇದನ್ನು ಕಂಡ ಸಾರ್ವಜನಿಕರು  ಜಲ್ದೀ ಸಿದ್ಧೀಕ್ ನನ್ನು ಹಿಡಿಯಲು ಮುಂದಾದಾಗ ಆತ ಓಡಲು ಯತ್ನಿಸಿದ್ದಾನೆ.  ಆಸ್ಪತ್ರೆಯಿಂದ  ದೂರದ 1 ಕಿ.ಮೀ ವರೆಗೂ ಓಡಿಸಿದ ಸಾರ್ವಜನಿಕರು  ಬಳಿಕ ಹಿಡಿದು  ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.  ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸಿದ್ಧೀಕ್ ಉಳ್ಳಾಲದಾದ್ಯಂತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ  ಗಾಂಜಾ ಮಾರಾಟ ಮಾಡಲು ಮಗ ಸೇರಿದಂತೆ ಯುವಕರ ತಂಡವೊಂದನ್ನು  ರಚಿಸಿದ್ದಾನೆ.  ಇದರಿಂದ ಉಳ್ಳಾಲದಲ್ಲಿ ಆಗಾಗ್ಗ ಅಶಾಂತಿ ಉಂಟಾಗುತ್ತಿದೆ ಎಂಬ ಆರೋಪ  ಖಮಾಲುದ್ದೀನ್ ಸ್ನೇಹಿತರಿಂದ ಕೇಳಿಬಂದಿದೆ.

Exit mobile version