ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಲ್ಲರಕೋಡಿ ಎಂಬಲ್ಲಿ ಸೋಮವಾರ ನಸುಕಿನ ಜಾವ ಭೂಕುಸಿತ ಉಂಟಾಗಿ, 15 ಅಡಿ ಆಳದ ಸುರಂಗ ಪತ್ತೆಯಾಗಿ ಮನೆಯೊಂದು ಅಪಾಯದಂಚಿನಲ್ಲಿ ಸಿಲುಕಿದೆ.
ಜೀವಾಪಾಯದಿಂದ ಪಾರು:
ಮನೆಯ ಹಿಂಭಾಗದಲ್ಲಿ ಬಟ್ಟೆ ಒಗೆಯುವ ಕಲ್ಲು ಹಾಗೂ ಪಾತ್ರೆ ತೊಳೆಯುವ ಜಾಗವಿತ್ತು. ಇದರಲ್ಲಿ ಎಂದಿನಂತೆ ಬೆಳಗ್ಗಿನ ಜಾವ ಪದ್ಮಾವತಿ ಅವರು ಕೆಲಸ ಮಾಡುತ್ತಿರುತ್ತಾರೆ, ಆದರೆ ಸೋಮವಾರ ಮನೆಯ ಒಳಗೆಯೇ ಇದ್ದರು. ಇದರಿಂದ ಜೀವಹಾನಿ ತಪ್ಪಿದಂತಾಗಿದೆ. ಮಳೆಯಿದ್ದ ಹಿನ್ನೆಲೆಯಲ್ಲಿ ಹಿಂಬದಿ ಕುಸಿತ ಆಗಿರುವುದು ಅವರ ಗಮನಕ್ಕೆ ಬಂದಿರಲಿಲ್ಲ.
ಪುತ್ರನಿಗೆ ಅಪಘಾತ:
ಸದಾಶಿವ ಅವರ ಪುತ್ರ ಶರತ್ ಎಂಬವರಿಗೆ ವಾರದ ಹಿಂದೆ ಅಪಘಾತ ನಡೆದು ವಾರದಿಂದ ಆಸ್ಪತ್ರೆಯಲ್ಲಿದ್ದರು. ಇಂದು ಮನೆಗೆ ವಾಪಸ್ಸಾಗುವ ನಿಟ್ಟಿನಲ್ಲಿ ಸದಾಶಿವ ಅವರು ಆಸ್ಪತ್ರೆಗೆ ತೆರಳಿದ್ದರು. ಮನೆಯಲ್ಲಿ ಪದ್ಮಾವತಿ ಮಾತ್ರ ಒಬ್ಬರು ಇದ್ದರು.
ಕೊಣಾಜೆ ಪಂಚಾಯಿತಿ ನೇತೃತ್ವದಲ್ಲಿ ಕಾರ್ಯಾಚರಣೆ:
ಮನೆಯ ಕೆಳ ಅಡಿಯಲ್ಲಿ ಕಾಣಿಸಿಕೊಂಡ ಸುರಂಗಕ್ಕೆ ಕೊಣಾಜೆ ಪಂಚಾಯಿತಿ ವತಿಯಿಂದ ಮಣ್ಣು ತುಂಬಿಸುವ ಕೆಲಸ ನಡೆಯಿತು. ಅಪಾಯದಲ್ಲಿರುವ ಮನೆಯನ್ನು ಉಳಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಸ್ಥಳೀಯ ಹಿಂದೂ, ಮುಸ್ಲಿಂ , ಕ್ರಿಶ್ಚಿಯನ್ನರು ಸೇರಿಕೊಂಡು ಕೈಜೋಡಿಸಿದರು.
ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಅಲಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ಭೇಟಿ ನೀಡಿ ಮನೆ ಉಳಿಸುವ ಕಾರ್ಯಕ್ಕೆ ಕೈಜೋಡಿಸಿದರು.