ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಕುಡಿತ ಜೀವಕ್ಕೇ ಹಾಳು, ಕುಡಿತ ಹೆಚ್ಚಾದಲ್ಲಿ ಮಣ್ಣು ಪಾಲಾಗುವುದು ಅಂತೂ ಗ್ಯಾರಂಟಿ . ತೊಕ್ಕೊಟ್ಟು ಮಾಯಾ ಬಾರಿನ ಎದುರುಗಡೆ ಶುಕ್ರವಾರ ತಡರಾತ್ರಿ ನಡೆದ ಘಟನೆ ಇಂತಹದ್ದೊಂದು ಮಾತನ್ನು ನಿಜವಾಗಿಸಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ಮಣ್ಣಿನಲ್ಲಿ ಮುಳುಗಿದ್ದು ಮದ್ಯವ್ಯಸನಿಗಳಲ್ಲ, ಬದಲಾಗಿ ಅದನ್ನು ಸೇವಿಸಲು ಬಂದಿದ್ದ ಮೂರು ಗ್ರಾಹಕರ ದ್ವಿಚಕ್ರ ವಾಹನಗಳು.
ನಡೆದಿದ್ದೇನು : ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಿಮಿತ್ತ ಮಾಯಾ ಬಾರ್ ಇರುವ ಕಟ್ಟಡದ ಎದುರಿನ ಭಾಗವನ್ನು ಕಡಿಯಲಾಗಿತ್ತು. ಇದೇ ವೇಳೆ ಆ ಭಾಗದಲ್ಲಿ ಇದ್ದಂತಹ ಬಾವಿಗೆ ಕಾಂಕ್ರೀಟ್ ಹಾಕುವ ಮೂಲಕ ಮುಚ್ಚಿ, ಅದರ ಮೇಲೆ ಮಣ್ಣು ಮುಚ್ಚಲಾಗಿತ್ತು. ಆದರೆ ನಿರಂತರವಾಗಿ ಹರಿದ ಮಳೆ ಹಾಗೂ ಅದರ ಅಡಿಭಾಗದಲ್ಲೇ ರಾ.ಹೆ.ಯ ಚರಂಡಿ ಹಾದುಹೋಗುವುದರಿಂದ ನೀರಿನ ಭಾರವನ್ನು ಹೊರಲಾರದೆ ಕಾಂಕ್ರೀಟ್ ಸ್ಲಾಬ್ ತುಂಡಾಗಿದೆ. ಇದರಿಂದ ಕುಸಿತ ಉಂಟಾಗಿ ಮೇಲಿದ್ದ ಇಂಟರ್ ಲಾಕ್ ಸಹಿತ ವಾಹನಗಳು ಕೆಳಗಿದ್ದ ಬಾವಿಯೊಳಗೆ ಸೇರಿದೆ.
ಒಂಜಿ ಬಿಯರ್ ಲಗಾಡಿ ಕೊರ್‍ಂಡ್: `ಛೇ ಲಾಸ್ಟ್ ಒಂಜಿ ಬಿಯರ್ ಒಯಿಪುಗಾಂದ್ ಉಂತುದಿನಿ. ಆರ್ಡರ್ ಮಲ್ತ್‍ದ್ ಅರ್ಧ ಪರೋಡುಂದಾನಗನೇ ಎಂಕ್ಲೆನ ಬೈಕ್ ಮಾಯ್ಕಾ ಆತ್‍ಂಡ್’ ಇದು ಮೂರು ಬೈಕ್‍ಗಳು ಮಣ್ಣಿನೊಳಗೆ ಹೋಗಿ ಸಾವಿರಾರು ರೂ. ನಷ್ಟ ಉಂಟಾದ ದ್ವಿಚಕ್ರ ವಾಹನಗಳ ಮಾಲೀಕರಾದ ಅನಿಲ್, ಮ್ಯಾಕಲೀನ್, ಓಸ್ವಾಲ್ಡ್ ಎಂಬವರ ಹತಾಶೆಯ ಮಾತು. ಅದರಲ್ಲಿಯೂ ಒಂದು ಬೈಲ್ ಒಂದು ಲಕ್ಷ ಮೌಲ್ಯದ್ದಾಗಿದ್ದು, ಇತ್ತೀಚೆಗಷ್ಟೇ ಖರೀದಿಸಿದ್ದರು.
ವಾಹನಗಳಿಗಾಗಿ ಮೂರು ಗಂಟೆಗಳ ಕಾರ್ಯಾಚರಣೆ :
ಕುಸಿದುಬಿದ್ದು ನಿರ್ಮಾuವಾದ ಹೊಂಡದಲ್ಲಿ ಅರ್ಧದಷ್ಟು ನೀರು ಇತ್ತು. ಅದನ್ನು ಪಂಪ್‍ಸೆಟ್ ಬಾಡಿಗೆದಾರ ರಾತ್ರಿ ಹಗಲೆನ್ನದೆ ನಿಸ್ವಾರ್ಥ ಸೇವೆಯನ್ನೂ ನಿರ್ವಹಿಸುವ ಉಳ್ಳಾಲದ ಲತೀಫ್ ಎಂಬವರ ಮೂಲಕ ಪಂಪ್ ಸೆಟ್ ತರಿಸಿ ನಿರಂತರ ಒಂದು ಗಂಟೆ ಕಾಲ ನೀರನ್ನು ತೆಗೆಯಲಾಯಿತು. ಆ ಬಳಿಕ ಎರಡು ದ್ವಿಚಕ್ರ ವಾಹನಗಳು ಮಣ್ಣಿನೊಳಗಡೆ ಕಂಡು ಬಂತು.
ಆ ಬಳಿಕ ರಾ.ಹೆ.ಯ ಕ್ರೇನ್ ಮೂಲಕ ಅದರಲ್ಲಿ ಬಾರಿನ ಕಟ್ಟಡದ ಕಾಮಗಾರಿ ಗುತ್ತಿಗೆ ನಿರ್ವಹಿಸಿದ್ದ ಮನೋಜ್ ಎಂಬವರೇ ಕುಳಿತು ಕ್ರೇನಿನ ಸಹಾಯದಿಂದ ಕೆಳಗಿಳಿದು ವಾಹನಗಳನ್ನು ಹಗ್ಗದಲ್ಲಿ ಕಟ್ಟಿ ಮೇಲಕ್ಕೆತ್ತಿದರು. ಉಳ್ಳಾಲ ಠಾಣಾಧಿಕಾರಿ ಶಿವಪ್ರಕಾಶ್ ಅವರ ನಿರ್ದೇಶನದಂತೆ ಒಂದೊಂದೇ ವಾಹನಗಳನ್ನು ಮೇಲಕ್ಕೆತ್ತಲಾಯಿತು. ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಇದ್ದರೂ, ತರಬೇತಿ ಪಡೆದ ಸಿಬ್ಬಂದಿ ಹೊಂಡಕ್ಕೆ ಇಳಿಯಬೇಕಿತ್ತು. ಆದರೆ ಸ್ಥಳೀಯರನ್ನು ಇಳಿಸಿರುವುದು ತಪ್ಪು ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂತು.