ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ವಿಕೇಂದ್ರೀಕರಣ ನೀತಿಯಿಂದ ಉದ್ದಿಮೆಗಳು ಕ್ಷೀನಗೊಳ್ಳುತ್ತಿದ್ದು, ರಾಜ್ಯದಲ್ಲಿ ಇದ್ದಂತಹ 32 ಜವಳಿ ಕಾರ್ಖಾನೆಗಳಲ್ಲಿ ಕೇವಲ ದಾವಣಗೆರೆಯ ಗೋಕಾಕ ಜವಳಿ ಕಾರ್ಖಾನೆ ಮಾತ್ರ ಉಳಿದಿದೆ. ಇದರಿಂದ ಸಾವಿರಾರು ಮಂದಿ ಕಾರ್ಮಿಕರು ಬೀದಿಪಾಲಾದರೂ, ಅವರಿಗೆ ಆಶ್ರಯವಾಗಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜಕೀಯದ ಆಟದಲ್ಲಿ ನಿರತವಾಗಿದೆ ಎಂದು ಸಿಐಟಿಯುನ ರಾಜ್ಯ ಅಧ್ಯಕ್ಷ ವಿ.ಜೆ.ಕೆ.ನಾಯರ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಕಾಂ. ಪೂವಪ್ಪ ಸಾಲ್ಯಾನ್ ವೇದಿಕೆಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಇದರ ಆಶ್ರಯದಲ್ಲಿ ಮಂಗಳವಾರ ಜರಗಿದ 15 ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕೈಗಾರಿಕೆಗಳು ಅಭಿವೃದ್ಧಿಯಾಗುವ ಕುರಿತು ಸರಕಾರಗಳು ಕಾಳಜಿ ವಹಿಸದೇ ಇದ್ದಲ್ಲಿ ಕಾರ್ಮಿಕರು ಬದುಕಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸೆ.2 ರಂದು ನಡೆಯಲಿರುವ ಹೋರಾಟ ರಾಜ್ಯಕ್ಕೇ ಮಾದರಿಯಾಗಬೇಕು. 10,500 ರೂ ಕನಿಷ್ಟ ಕೂಲಿ 23 ಉದ್ದಿಮೆಗೆ ತೀರ್ಮಾನ ಮಾಡಿದರೂ, ಸರಕಾರಗಳು ಮಾಲೀಕರ ಮೂಲಕ ಜಾರಿಯಾಗದಂತೆ ಕೇಸು ಹಾಕಿಸುತ್ತಿದೆ. ಕಾರ್ಮಿಕರ ಕನಿಷ್ಟ ಕೂಲಿಯನ್ನು 1957 ಇಸವಿಯಲ್ಲಿ ನಿಗದಿಯಾಗಿತ್ತು. ಆ ಬಳಿಕ 70 ವರ್ಷಗಳಿಂದ ಈವರೆಗೂ ಮಾಡಲು ಅಸಾಧ್ಯವಾಗಿದೆ. ರಾಜ್ಯದಲ್ಲಿ ಸಿಐಟಿಯು 83ನೇ ಇಸವಿಯಿಂದ ಸತತವಾಗಿ ಕನಿಷ್ಟ ಕೂಲಿ ಬಗ್ಗೆ ಮಾತನಾಡುತ್ತಿದೆ. 2.5 ಕೋಟಿ ಜನಕ್ಕೆ 100 ಹೆಚ್ಚಳ ಸಿಗುವುದು ಅಂದರೆ 2,500 ಸಾವಿರ ಕೋಟಿ ಹಣ ದಿನಾ ಕರ್ನಾಟಕದಲ್ಲಿ ಖರ್ಚಾಗುತ್ತದೆ. ಇದರಿಂದ ಆಟೋ, ಹೊಟೇಲ್, ಗಿರಣಿ ಅಂಗಡಿ, ಮೀನು ಹಿಡಿಯುವವರ, ಬಟ್ಟೆ ಮಾರುªವರ ವ್ಯವಹಾರವೆಲ್ಲವೂ ಅಭಿವೃದ್ಧಿಯಾಗುತ್ತದೆ. ಕಾರ್ಮಿಕರ ಅಭಿವೃದ್ಧಿ ಜನರ ಪರವಾದ ಅಭಿವೃದ್ಧಿಯಾಗಿದೆ. 70 ವರ್ಷಗಳಲ್ಲಿ ಮಂಗಳೂರಿನಲ್ಲಿ ಯಾವ ಕಾರ್ಖಾನೆಯೂ ಬಂದಿಲ್ಲ. ಆದರೆ ಒಂದು ಫರ್ಟಿಲೈಸರ್ ಕಾರ್ಖಾನೆ ಮಾತ್ರ ಬಂದಿದೆಯಷ್ಟೇ. ಅದರ ಮಾಲೀಕ ಮಲ್ಯ 9,000 ಕೋಟಿ ಹೊಡ್ಕೊಂಡು ದೇಶ ಬಿಟ್ಟು ಹಾಯಾಗಿದ್ದಾನೆ. ಮಾಜಿ ಪ್ರಧಾನಿ ದೇವೇಗೌಡರು ಕರ್ನಾಟಕದ ಮಣ್ಣಿನ ಮಗ ಅಂತಾರೆ, 1,000 ಕೋಟಿ ರೂ. ಆಸ್ತಿ ಲೆಕ್ಕೆ ಕೊಟ್ಟಿರುವ ಉದ್ಯಮಿಯನ್ನು ಜೆಡಿಎಸ್‍ನ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದಾರೆ. 40 ಶಾಸಕರಿಗೆ ತಲಾ 2 ಕೋಟಿಯಂತೆ ಕೊಟ್ಟು, ಪಕ್ಷದ ಮುಖಂಡರಿಗೆ 20 ಕೋಟಿ ರೂ. ನೀಡಿ 100 ಕೋಟಿ ರೂ ಖರ್ಚು ಮಾಡುವ ತಾಕತ್ತು ಇರುವ ಯಾರೂ ಕೂಡಾ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿ ಪಾರ್ಲಿಮೆಂಟಿನಲ್ಲಿ ನಿದ್ರೆ ಮಾಡುವ ಕೆಲಸವನ್ನು ಮಾಡುತ್ತಾರೆ. ಮತ್ತೆ ಐದು ವರ್ಷಗಳಲ್ಲಿ ಆತನ ಆಸ್ತಿ ಎರಡು ಪಟ್ಟು ಜಾಸ್ತಿಯಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ವಲಯ ಸಿಐಟಿಯುನ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ವಹಿಸಿದ್ದರು.
ಸಿಐಟಿಯುನ ರಾಜ್ಯ ಮುಖಂಡ ವಸಂತ ಆಚಾರಿ, ಸಿಐಟಿಯುನ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯುನ ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಜೆಪ್ಪಿನಮೊಗರು, ಸಿಐಟಿಯುನ ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ್ ನಾೈಕ್, ಬಿ.ಎಂ.ಭಟ್, ಯು.ಬಿ.ಲೋಕಯ್ಯ, ರಾಮಣ್ಣ ವಿಟ್ಲ, ಪದ್ಮಾವತಿ.ಯಸ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು.
ಬಹಿರಂಗ ಸಭೆಗೆ ಮುನ್ನ ತೊಕ್ಕೊಟ್ಟು ಬಸ್ಸು ತಂಗುದಾಣದಿಂದ ಒಳಪೇಟೆಯ ಅಂಬೇಡ್ಕರ್ ಮೈದಾನದವರೆಗೆ ಮೆರವಣಿಗೆ ನಡೆಯಿತು.