ಮೊಂಟೆಪದವು: ಉಮ್ರಾ ಯಾತ್ರೆಗೆ ತೆರಳಿ ವಾಪಸ್ಸಾಗುತ್ತಿದ್ದ ಮೊಂಟೆಪದವು ಮೂಲದ ತಾಯಿ ಹಾಗೂ ಮಗ ಝುಬೈಲ್ ನ ಖಸೀಂ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಅದೇ ಕಾರಿನಲ್ಲಿದ್ದ ಮೃತ ಯುವಕನ ತಂದೆ ಹಾಗೂ ಪತ್ನಿ ಗಾಯಗೊಂಡು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಂಟೆಪದವು ನಿವಾಸಿ ಅಬ್ಬಾಸ್ (29) ಹಾಗೂ ಅವರ ತಾಯಿ ಖತೀಜಮ್ಮ (50) ಮೃತಪಟ್ಟವರು. ಅದೇ ಕಾರಿನಲ್ಲಿದ್ದ ತಂದೆ ಮಹಮ್ಮದ್(60) ಹಾಗೂ ಪತ್ನಿ ಮೈನಾಝ್ (20) ಗಾಯಗೊಂಡು ಖಸೀಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌದಿ ಅರೆಬಿಯಾದ ಝುಬೈಲ್ ನಲ್ಲಿ ಕನ್ ಸ್ಟ್ರಕ್ಷನ್ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ಬಾಸ್ ಅವರು ಕಳೆದ 15 ದಿನಗಳ ಹಿಂದೆ ಪತ್ನಿ ಹಾಗೂ ಹೆತ್ತವರನ್ನು ಉಮ್ರಾ ಯಾತ್ರೆಗೆ ತೆರಳಲು ಅಲ್ಲಿಗೆ ಕರೆಯಿಸಿದ್ದರು. ಅಲ್ಲಿಂದ ಉಮ್ರಾ ಯಾತ್ರೆಗೆ ಕೇರಳ ಮೂಲದ ಸ್ನೇಹಿತನ ಕುಟುಂಬದ ನಾಲ್ಕು ಮಂದಿ ಹಾಗೂ ಅಬ್ಬಾಸ್ ಕುಟುಂಬದ ನಾಲ್ಕು ಮಂದಿ ಕಾರಿನಲ್ಲಿ ತೆರಳಿದ್ದರು.
ಸಚಿವ ಖಾದರ್ ಭೇಟಿ: ಮೃತರ ಮೊಂಟೆಪದವಿನ ಮನೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭ ನರಿಂಗಾನ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಸದಸ್ಯ ಮಹಮ್ಮದ್ ಫಯಾಝ್, ಜಿ.ಪಂ ಮಾಜಿ ಸದಸ್ಯ ಎನ್.ಎಸ್ ಕರೀಂ ಮೊದಲಾದವರು ಇದ್ದರು.