ತೊಕ್ಕೊಟ್ಟು: ಎತ್ತಿನಹೊಳೆ ಯೋಜನೆ ಮೂಲಕ ಜಿಲ್ಲೆಯನ್ನು ಬರಡುಗೊಳಿಸುವ ರಾಜಕಾರಣಿಗಳಿಗೆ ಸದ್ಬುದ್ಧಿಯನ್ನು ನೀಡಲಿ ಎಂದು ಮೇ.19 ರಂದು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು ಎಂದು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಹೇಳಿದ್ದಾರೆ.
ಅವರು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೇ.17,18,19 ರಂದು ನಡೆಯಲಿರುವ ಪ್ರಥಮ ವರ್ಷಾಚರಣೆ ಹಾಗೂ ಮಹಾಗಣಪತಿಯಾಗ, ಮಹಾರುದ್ರಯಾಗ, ಭಾಗ್ಯಸೂತ್ರಯಾಗ ಹಾಗೂ ಚಂಡಿಕಾಯಾಗದ ಕುರಿತು ತೊಕ್ಕೊಟ್ಟುವಿನಲ್ಲಿ ಸೋಮವಾರ ಕರೆದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಗೆ ಸಂಬಂಧಿಸಿದ ರಾಜಕಾರಣಿಗಳು ಸೇರಿಕೊಂಡು ಎತ್ತಿನಹೊಳೆ ಯೋಜನೆ ಮೂಲಕ ಜೀವನದಿ ನೇತ್ರಾವತಿಯನ್ನು ತಿರುಗಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ಬಾರಿ ಜನತೆ ನೀರಿಲ್ಲದೆ ಕಂಗೆಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ಜಿಲ್ಲೆಯ ಜನರ ನೀರಿನ ಮೂಲ ಆಗಿರುವ ನೇತ್ರಾವತಿಯನ್ನೇ ತಿರುಗಿಸಲು ಹೊರಟಿರುವುದು ತೀರಾ ನಾಚಿಕೆಗೇಡು. ಇದನ್ನು ತಿರುಗಿಸಲು ಹೊರಟ ರಾಜಕಾರಣಿಗಳಿಗೆ ಒಳ್ಳೆಯ ಬುದ್ಧಿ ನೀಡಿ, ನದಿಯನ್ನೇ ತಿರುಗಿಸದಂತೆ ಅವರು ನೋಡಿಕೊಳ್ಳಲಿ. ಅದಕ್ಕಾಗಿ ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಯಾಗದ ಕೊನೆಯ ದಿನವಾದ ಮೇ.19 ರಂದು ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು ಎಂದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಇನೋಳಿ, ಗೋಪಾಲ ಶೆಟ್ಟಿ ಇನೋಳಿ, ನಾರಾಯಣ ಕುಂಪಲ, ಜಯಂತಿ ಉಪಸ್ಥಿತರಿದ್ದರು.