Site icon Ullalavani

ಮೇ.5 ರಂದು ಶಾಂತಿಗಾಗಿ ಪಾದಯಾತ್ರೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಶಾಂತಿಸಭೆಯಲ್ಲಿ ಕೇವಲ ಮುಖಂಡರುಗಳು ಮಾತ್ರ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದರಿಂದ ಗಲಭೆ ನಿಯಂತ್ರಿಸಲು ಅಸಾಧ್ಯ . ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಶಾಂತಿ ಸಂದೇಶವನ್ನು ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು , ಮುಖಂಡರುಗಳ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಮೇ. 5 ರಂದು ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮಧ್ಯಾಹ್ನ 3.00 ಗಂಟೆಗೆ ಉಳ್ಳಾಲದಾದ್ಯಂತ ಶಾಂತಿಗಾಗಿ ಪಾದಯಾತ್ರೆ ನಡೆಯಲಿದೆ ಎಂದು ಉಳ್ಳಾಲದಲ್ಲಿ ತಾತ್ಕಾಲಿಕವಾಗಿ ನಿಯುಕ್ತಿಗೊಂಡ ಠಾಣಾಧಿಕಾರಿ ಶಿವಪ್ರಕಾಶ್ ಹೇಳಿದ್ದಾರೆ.

ಅವರು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಕೊಲೆ , ಕೊಲೆಯತ್ನ ಹಾಗೂ ಮತೀಯ ಗಲಭೆಗೆ ಪ್ರಚೋದಿಸುವ ಘಟನೆಗಳನ್ನು ಹತ್ತಿಕ್ಕುವ ಸಲುವಾಗಿ ವಿವಿಧ ಮುಖಂಡರುಗಳ ಸಮ್ಮುಖದಲ್ಲಿ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾದ ಶಾಂತಿಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಉಳ್ಳಾಲದಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯದಂತೆ ಶಾಂತಿ ಸಂದೇಶವನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸಲು ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಉಳ್ಳಾಲದ ಕೋಡಿ, ಕೋಟೆಪುರ, ತೊಕ್ಕೊಟ್ಟು, ಮೊಗವೀರಪಟ್ನ ಪ್ರದೇಶದಲ್ಲಿ ಪಾದಯಾತ್ರೆ ಸಾಗಲಿದೆ. ಇದರಲ್ಲಿ ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಶಾಂತಿ ಸಭೆಯಲ್ಲಿ ಹಿರಿಯ ಮುಖಂಡರುಗಳು ಮಾತ್ರ ಪಾಲ್ಗೊಂಡು ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಪಾದಯಾತ್ರೆಯಿಂದ ಯುವಸಮುದಾಯದವರಿಗೂ ಸಂದೇಶವನ್ನು ತಲುಪಿಸಲು ಸಾಧ್ಯವಾಗುವುದು ಎಂದರು.

ಈ ಸಂದರ್ಭ ಎಸಿಪಿ ಕಲ್ಯಾಣ್ ಶೆಟ್ಟಿ, ಅಪರಾಧ ವಿಭಾಗದ ಎಸ್. ಐ ರಾಜೇಂದ್ರ ಹಾಗೂ ವಿವಿಧ ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

Exit mobile version