ಉಳ್ಳಾಲ: ಮತ್ತೆ ಉಳ್ಳಾಲದಲ್ಲಿ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು ಸೋಮವಾರ ತಡರಾತ್ರಿ ವೇಳೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಮೂರು ಮಂದಿಯ ಮೇಲೆ ತಲವಾರು ದಾಳಿ ನಡೆಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಲಾರು ನಿವಾಸಿ ಸಫ್ವಾನ್ (20) ಗಂಭೀರವಾಗಿ ಗಾಯಗೊಂಡವರು. ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜತೆಗಿದ್ದ ಅದೇ ಊರಿನವರೇ ಆದ ನಿಝಾಮ್(19), ಸಲೀಂ(24) ಸ್ವಲ್ಪ ಗಾಯಗೊಂಡು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದಕ ಸಮೀಪ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಸಫ್ವಾನ್, ನಿಝಾಮ್ ಮತ್ತು ಸಲೀಂ ಅವರು ಕ್ಯಾಟರಿಂಗ್ ವಾಹನವನ್ನು ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ನಿಲ್ಲಿಸಲು ತಡರಾತ್ರಿ ವೇಳೆ ಆಗಮಿಸಿದ್ದರು. ಅಲ್ಲಿ ವಾಹನ ನಿಲ್ಲಿಸಿ ಬೈಕಿನಲ್ಲಿ ಮೂರು ಮಂದಿಯೂ ಜತೆಯಾಗಿ ತೆರಳುವ ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಸಮೀಪ ಅಡಗಿಕುಳಿತ ಸುಮಾರು ಐದು ಮಂದಿ ದುಷ್ಕರ್ಮಿಗಳ ತಂಡ ಚಲಿಸುತ್ತಿದ್ದ ಬೈಕಿನತ್ತ ತಲವಾರು ಬೀಸಿ ಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಹಾಗೂ ಹಿಂಬದಿ ಕುಳಿತಿದ್ದ ಸಲೀಂ ಇಬ್ಬರೂ ದಾಳಿಯಿಂದ ತಪ್ಪಿಸಿಕೊಂಡರೆ ನಡುವೆ ಕುಳಿತಿದ್ದ ಸಫ್ವಾನ್ ಮೇಲೆ ತಂಡ ತಲವಾರಿನಿಂದ ಹೊಟ್ಟೆಭಾಗಕ್ಕೆ ಕಡಿದಿತ್ತು. ಆದರೂ ತಿವಿದ ಹೊಟ್ಟೆಯ ಭಾಗವನ್ನು ಕೈಯಲ್ಲೇ ಹಿಡಿದುಕೊಂಡ ಸಫ್ವಾನ್ ಒಂದು ಕಿ.ಮೀ ದೂರದ ಕಾಪಿಕಾಡು ವರೆಗೂ ಓಡಿ ತಪ್ಪಿಸಿಕೊಂಡು, ಅಲ್ಲಿಂದ ಗೆಳೆಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಡರಾತ್ರಿಯಾದರೂ ಗೆಳೆಯನ ಕರೆಗೆ ಸ್ಪಂಧಿಸಿದ ಸಮದ್ ಮತ್ತು ನಝ್ರತ್ ಎಂಬವರು ಕೂಡಲೇ ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
3 ಗಂಟೆ ಹೆದರಿ ಅವಿತು ಕುಳಿತಿದ್ದರು : ದಾಳಿಗೊಳಗಾದ ನಿಝಾಂ ಬೆಳಗ್ಗಿನವರೆಗೂ ನಾಪತ್ತೆಯಾಗಿದ್ದು, ಪೊಲೀಸರು ಸಹಿತ ಸಂಬಂಧಿಕರು ಹುಡುಕಾಟ ನಡೆಸಿದ್ದರು. ಬೆಳಗ್ಗಿನ ವೇಳೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದ ನಿಝಾಂ ತಾನು ಹೆದರಿ ಕಾಪಿಕಾಡು ಸಮೀಪ ಪೊದೆಯೊಂದರಲ್ಲಿ ಮೂರು ಗಂಟೆಯವರೆಗೂ ಅವಿತು ಕುಳಿತಿರುವ ವಿಚಾರವನ್ನು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ: ಘಟನೆ ನಡೆದ ಸ್ಥಳದಲ್ಲಿ ಇರುವ ಬ್ಯಾಂಕಿನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಚಿತ್ರ ಸೆರೆಯಾಗಿದೆ. ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ ಹಾಗೂ ಕಪ್ಪು ಬಣ್ಣದ ಬೈಕಿನಲ್ಲಿ ಬಂದಿರುವ ದುಷ್ಕರ್ಮಿಗಳು ತಲವಾರಿನ ಮೂಲಕ ಕೃತ್ಯ ಎಸಗಿದ್ದು, ಆರೋಪಿಗಳೆಲ್ಲರೂ ತೊಕ್ಕೊಟ್ಟು ಕೃಷ್ಣನಗರ ಹಾಗೂ ಗಣೇಶನಗರ ನಿವಾಸಿಗಳೆಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಪ್ರತೀಕಾರದ ಕೃತ್ಯ: ಎ.12 ರಂದು ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಹತ್ಯೆ ನಡೆದು, ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದಕ್ಕೆ ಪ್ರತೀಕಾರ ಎಂಬಂತೆ ಘಟನೆಗಳು ನಡೆಯುತ್ತಿದ್ದು, ಎ.25ರಂದು ನಸುಕಿನ ಜಾವ ಮಂಗಳೂರಿನ ಧಕ್ಕೆಗೆ ಮೀನುಗಾರಿಕೆಗೆಂದು ತೆರಳುತ್ತಿದ್ದ ಕೋಡಿ ನಿವಾಸಿ ಇಬ್ರಾಹಿಂ ನಫ್ಸಾನ್ ಎಂಬವರನ್ನು ದುಷ್ಕರ್ಮಿಗಳು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಗಂಭೀರ ಸ್ಥಿತಿಯಲ್ಲಿರುವ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.
ಪಥಸಂಚಲನ: ಕೆಎಸ್‍ಆರ್‍ಪಿ, ಸಿಐಎಸ್‍ಎಫ್ ಹಾಗೂ ಮಂಗಳೂರು ಕಮೀಷನರೇಟ್ ವ್ಯಾಪ್ತಿ ಪೊಲೀಸರಿಂದ ಉಳ್ಳಾಲದ ಕೋಡಿ, ಕೋಟೆಪುರ, ಮೊಗವೀರಪಟ್ನ ಪ್ರದೇಶಗಳಲ್ಲಿ ಪಥಸಂಚಲನ ಹಾಗೂ ವಾಹನಗಳ ಪೆರೇಡ್ ನಡೆಯಿತು.