Site icon Ullalavani

ಮೊಗವೀರಪಟ್ನ ಮೀನುಗಾರನ ಕೊಲೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮೊಗವೀರಪಟ್ನ: ಮೀನುಗಾರಿಕೆಂದು ತೆರಳಿದ್ದ ವ್ಯಕ್ತಿಯ ಶವ ಕೋಟೆಪುರ ಸಮೀಪದ ಬರಾಕಾ ಫಿಶ್ ಆಯಿಲ್ ಮಿಲ್ ಮುಂಭಾಗದಲ್ಲಿ ಮುಖ ಜಜ್ಜಿದ ಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದ್ದು, ಘಟನೆಯಿಂದ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ಉಂಟಾಗಿದೆ.

ಮೊಗವೀರಪಟ್ನ ನಿವಾಸಿ ರಾಜು ಕೋಟ್ಯಾನ್ (41) ಶವ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ನಸುಕಿನ 2 .00 ಗಂಟೆ ಸುಮಾರಿಗೆ ಮನೆಯಿಂದ ಕೋಟೆಪುರದ ಧಕ್ಕೆಗೆ ನಡೆದುಕೊಂಡು ಹೋದವರ ಶವ ಇಂದು ಮಧ್ಯಾಹ್ನ ವೇಳೆ ಪತ್ತಯಾಗಿದೆ. ಕೋಟೆಪುರ ಉಳ್ಳಾಲ ರಸ್ತೆ ಬದಿಯ ಪೊದೆಯ ಕೆಳಗಡೆ , ಬರಾಕಾ ಆಯಿಲ್ ಮಿಲ್ ಎದುರುಗಡೆಯೇ ಮೃತದೇಹ ಮುಖಕ್ಕೆ ಜಜ್ಜಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ರಸ್ತೆಯಲ್ಲಿ ಹಲವು ವಾಹನಗಳು ತೆರಳಿದ್ದರೂ, ಸಮೀಪದ ಮಿಲ್‍ನಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರೂ ಮಧ್ಯಾಹ್ನದ ವೇಳೆ ರಸ್ತೆಬದಿಯಲ್ಲಿ ತೆರಳುತ್ತಿದ್ದ ಮಕ್ಕಳಿಗೆ ಮೃತದೇಹ ಕಂಡುಬಂದಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ: ರಾಜು ಅವರ ಮುಖದ ಭಾಗ ಸಂಪೂರ್ಣ ಜಜ್ಜಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಶಂಕೆ ಇದೆ. ಆದರೆ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿರುವ ಕಲ್ಲು ಪತ್ತೆಯಾಗಿಲ್ಲ. ಸ್ಥಳದಲ್ಲಿ 5 ಮೀ ವರೆಗೂ ರಕ್ತ ಚೆಲ್ಲಿದೆ. ಕೈಯಲ್ಲಿದ್ದ ಊಟದ ಬುತ್ತಿ ಕಾಲಿನ ಸಮೀಪ ಬಿದ್ದಿತ್ತು. ಸಮೀಪದಲ್ಲಿ ಕಸ ಕಡ್ಡಿಗಳು, ಕಲ್ಲುಗಳು ಇದ್ದುದರಿಂದ ಮಧ್ಯಾಹ್ನದವರೆಗೂ ಮೃತದೇಹ ಗೋಚರಿಸಿರಲಿಲ್ಲ .

ಸ್ಥಳೀಯವಾಗಿ ಗಾಂಜಾ ಸೇವಿಸುವ ಯುವಕರ ತಂಡ ಸಕ್ರಿಯವಾಗಿದ್ದು, ಹಲವು ಸಮಯಗಳಿಂದ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಕಲ್ಲು ಎಸೆಯುವುದು, ರಾತ್ರಿ ಹೊತ್ತಿನಲ್ಲಿ ಬಾಗಿಲು ತಟ್ಟುವಂತಹ ಪ್ರಕರಣಗಳು ನಡೆದಿತ್ತು. ಸದ್ಯ ಅದೇ ಗಾಂಜಾ ಪಡೆ ಗಲಭೆಗೆ ಸಂಚು ರೂಪಿಸಿಇಂತಹ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಸ್ನೇಹಜೀವಿ: ರಾಜು ಕೋಟ್ಯಾನ್ ಅವರಿಗೆ ಒಂಭತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಮಕ್ಕಳಿಲ್ಲ. ಬೆಳಗ್ಗಿನ ಜಾವ ಮನೆಯಲ್ಲಿ ಮೊಬೈಲನ್ನು ಇಟ್ಟು, ಪತ್ನಿಗೆ ಹೋಗಿಬರುವುದಾಗಿ ತಿಳಿಸಿ ಬುತ್ತಿ ಹಿಡಿದುಕೊಂಡು ಹೋಗಿದ್ದಾರೆ. ಇದೇ ವೇಳೆ ಇವರ ಜತೆಗೆ ಬೋಟಿನಲ್ಲಿ ತೆರಳುವ ಇನ್ನಿಬ್ಬರು ಮೀನುಗಾರರು ಬೋಟನ್ನು ತಲುಪಿದ್ದು, ರಾಜು ಅವರು ತಡವಾದರೂ ಬಾರದೇ ಇದ್ದುದರಿಂದ ಮನೆಗೆ ಕರೆ ಮಾಡಿದ್ದಾರೆ. ಮನೆಮಂದಿ ಅವರು ಮನೆಯಿಂದ ಹೋಗಿರುವ ವಿಚಾರವನ್ನು ತಿಳಿಸಿದ್ದರು. ಅವರು ಸ್ವಲ್ಪ ಹೊತ್ತು ಕಾದು ಬಳಿಕ ಮೀನುಗಾರಿಕೆಗೆ ತೆರಳಿದ್ದಾರೆ. ದಾಮೋದರ ಸುವರ್ಣ ಎಂಬವರಿಗೆ ಸೇರಿದ ಬೋಟಿನಲ್ಲಿ ಮೀನು ಹಿಡಿಯುವ ಕಾಂiÀiಕ ನಿರ್ವಹಿಸುತ್ತಿದ್ದ ರಾಜು ಅವರು ಈವರೆಗೂ ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರಲ್ಲ, ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿ ಸ್ನೇಹಜೀವಿಯಾಗಿದ್ದರು.

ಓರ್ವ ವಶಕ್ಕೆ
ಘಟನೆ ಸಂಬಂಧಿಸಿ ಉಳ್ಳಾಲ ಪೊಲೀಸರು ಶಂಕಿತ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಪುರ ಸಮೀಪ ಕೆಲ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾದಾತನನ್ನು ಶಂಕೆಯ ಮೇರೆಗೆ ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮೊಗವೀರ ಮಹಿಳೆಯರಿಂದ ಠಾಣೆಗೆ ಮುತ್ತಿಗೆ
ಮೊಗವೀರ ಸಮಾಜದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಪ್ರಕರಣವನ್ನು ಬೇಧಿಸುತ್ತಿಲ್ಲ.ಈ ಹಿಂದೆ ನಡೆದ ಚೂರಿ ಇರಿತದ ಪ್ರಕರಣದಲ್ಲಿ ಮೊಗವೀರ ಸಮಾಜದ ಯುವಕನೋರ್ವ ಕಿಡ್ನಿಯನ್ನು ಕಳೆದುಕೊಂಡಿದ್ದರೂ, ಆರೋಪಿಗಳ ಪತ್ತೆಯಾಗಿಲ್ಲ. ಕೂಡಲೇ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಮೃತ ರಾಜು ಕೋಟ್ಯಾನ್ ಅವರನ್ನು ಹತ್ಯೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿ ಮೊಗವೀರ ಸಮಾಜದ ಮಹಿಳೆಯರು ಉಳ್ಳಾಲ ಠಾಣೆಗೆ ರಾತ್ರಿ ವೇಳೆ ಮುತ್ತಿಗೆ ಹಾಕಿದರು. ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ ಕೂಡಲೇ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ಮುತ್ತಿಗೆಯನ್ನು ಕೈಬಿಟ್ಟಿದ್ದಾರೆ.

ತನಿಖೆಗೆ ವಿಶೇಷ ತಂಡಕ್ಕೆ ಆಗ್ರಹ
ಮೊಗವೀರಪಟ್ನದಲ್ಲಿ ನಡೆದಿರುವ ಮೀನುಗಾರನ ಹತ್ಯೆ ತೀರಾ ಖಂಡನೀಯ. ತಪ್ಪಿತಸ್ಥರನ್ನು ಶೀಘ್ರವೇ ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳುವಂತೆ ಹಾಗೂ ವಿಶೇಷ ತಂಡವನ್ನು ರಚಿಸವಂತೆ ಪೊಲೀಸ್ ಕಮೀಷನರ್ ಅವರಿಗೆ ತಿಳಿಸಿದ್ದೇನೆ. ಸ್ಥಳೀಯವಾಗಿ ಯಾರೂ ಶಾಂತಿ ಕದಡದಂತೆ ಸೌಹಾರ್ದಯುತವಾಗಿ ಇರಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Exit mobile version