ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸೂಕ್ಷ್ಮಪ್ರದೇಶ ಉಳ್ಳಾಲ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳೆದ 2 ವರ್ಷಗಳಿಂದ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ `ಮಹಿಳಾ ಸೂಪರ್ ಕಾಪ್’ ಅನಿಸಿಕೊಂಡಿರುವ ಭಾರತಿ ಅವರು 2016 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವೀಕರಿಸಲಿದ್ದಾರೆ.
2005 ರಲ್ಲಿ ಉಪನಿರೀಕ್ಷಕಿಯಾಗಿ ಸೇವೆ ಆರಂಭಿಸಿದ ಭಾರತಿ ಮೂಡಬಿದ್ರೆ, ಪಾಂಡೇಶ್ವರ, ಪಣಂಬೂರು ಹಾಗೂ ಸದ್ಯ ಉಳ್ಳಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲತ: ಚಿಕ್ಕಮಗಳೂರು ಕಡೂರು ನಿವಾಸಿಯಾಗಿರುವ ಅವರು ಎರಡು ವರ್ಷಗಳ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಉಪನಿರೀಕ್ಷಕಿ ಹುದ್ದೆಗೆ ಪರೀಕ್ಷೆ ಬರೆದು ತೇರ್ಗಡೆಯಾಗಿ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಆರಂಭಿಸಿದ್ದರು.
ಉಳ್ಳಾಲ ಉರೂಸು ಸಮಾರಂಭಕ್ಕೆ ಬಿಗಿಬಂದೋಬಸ್ತ್ ನಡೆಸಿ ಒಂದು ತಿಂಗಳ ಕಾಲ ನಡೆದ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದ ಉಪನಿರೀಕ್ಷಕಿ, ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಕೊಲೆ ಸಹಿತ ಹಲವು ಕೊಲೆಯತ್ನ ಪ್ರಕರಣದ ಆರೋಪಿಗಳನ್ನು ಸಕಾಲಿಕವಾಗಿ ಬಂಧಿಸುವ ಮೂಲಕ ತಕ್ಕ ಮಟ್ಟಿಗೆ ಕ್ರಿಮನಲ್ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಬಗ್ಗೆ ಸಾರ್ವಜನಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅದಕ್ಕಾಗಿ ಈ ಹಿಂದೆ ಬೆಂಗಳೂರು ಮಾನವ ಹಕ್ಕುಗಳ ಆಯೋಗದ ಪ್ರಶಸ್ತಿಯೂ ಇವರಿಗೆ ಲಭಿಸಿತ್ತು. ಇವರ ಪತಿ ನರಸಿಂಹ ಮೂರ್ತಿ ಕೆಎಸ್‍ಆರ್‍ಟಿಸಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಐದು ವರ್ಷದ ಮಗಳು ಪ್ರಾಥಮಿಕ ಶಾಲೆ ಕಲಿಯುತ್ತಿದ್ದಾಳೆ.