Site icon Ullalavani

ಬಡ ಅಂಗವಿಕಲರಿಗೆ ವ್ಹೀಲ್ ಚೇರ್ ವಿತರಣಾ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಮಾನಸಿಕ ರೋಗಿಗಳಿಗೆ ಸ್ಪಂಧಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸರಕಾರದಿಂದ ಮಾನಸಿ ಆಧಾರ ಯೋಜನೆ ಮೂಲಕ ಸಹಕಾರ ನೀಡುವ ಕಾರ್ಯ ಆಗುತ್ತಿದ್ದು, ಇದನ್ನು ಉಪಯೋಗಿಸುವ ಮೂಲಕ ಮಾನಸಿಕವಾಗಿ ಬಳಲುತ್ತಿರುವವರ ಬಾಳಿಗೆ ಬೆಳಕಾಗುವ ಕೆಲಸವನ್ನು ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ತೊಕ್ಕೊಟ್ಟುವಿನಲ್ಲಿ ಭಾನುವಾರ ನಡೆದ ಹೆಲ್ಪ್ ಇಂಡಿಯಾ ಫೌಂಡೇಶನ್ ನ ಕಚೇರಿ ಉದ್ಘಾಟನೆ ಹಾಗೂ ಬಡ ಅಂಗವಿಕಲರಿಗೆ ವ್ಹೀಲ್ ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಾರ್ಥವಿಲ್ಲದೆ , ಜಾತಿ, ಮತ ಬೇಧಭಾವವಿಲ್ಲದೆ ಎಲ್ಲರಿಗೂ ಮನುಷ್ಯತ್ವದ ರೂಪ ಕೊಟ್ಟು ಬಾಳು ಕೊಡುತ್ತಿರುವ ಫೌಂಡೇಶನ್ನಿನ ರಾಝಿಕ್ ಉಳ್ಳಾಲ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಮಾನವೀಯತೆಯ ಬಾಳು ಇರದ ಜೀವನ ವ್ಯರ್ಥವಾಗಿರುತ್ತದೆ. ಮಾನಸಿಕ ರೋಗಿಗಳ ಆರೈಕೆಯ ಮೈಲಕ ಫೌಂಡೇಶನ್ ಯುವಕರಿಗೆ ಮಾದರಿಯಾಗಿದೆ. ಮಾನಸಿಕ ರೋಗಿಗಳಿಗೆಬೇಕಾದ ಪುನರ್ವಸತಿ ಕೇಂದ್ರಗಳ ಸ್ಥಾಪನಗೆ ಸರಕಾರದಿಂದ ಹೆಚ್ಚು ಒತ್ತು ನೀಡಲಾಗುವುದು. ದೊಡ್ಡ ಯೋಜನೆಯಾಗಿರುವುದರಿಂದ ಸರಕಾರದಿಂದ ಅದನ್ನು ನಿಭಾಯಿಸಲು ಸಾಧ್ಯವಿಲ್ಲದಿರುವುದರಿಂದ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾನಸಿ ಆಧಾರ ಯೋಜನೆ ಮೂಲಕ ಸರಕಾರ ಸ್ಪಂಧಿಸುತ್ತಿದೆ. ಇದನ್ನು ಸಂಸ್ಥೆಗಳ ಅಧಿಕೃತರು ಸದುಪಯೋಗಪಡಿಸಬೇಕಿದೆ ಎಂದರು.

ಸ್ವಂತ 10 ಸೆಂಟ್ಸ್ ಜಾಗ ರೋಗಿಗಳ ಆರೈಕೆಗೆ: ಮಾನಸಿಕ ರೋಗಿಗಳ ಆಶ್ರಯಕ್ಕೆ ಹೆಲ್ಪ್ ಇಂಡಿಯಾ ಫೌಂಡೇಶನ್ ಸರಕಾರಿ ಜಾಗದ ಪ್ರಸ್ತಾಪ ಮುಂದಿಟ್ಟಿದ್ದು, ಸಾಧ್ಯವಾದಲ್ಲಿ ಸರಕಾರಿ ಜಾಗದ ಜತೆಗೆ ತನ್ನ ಸ್ವಂತ 10 ಸೆಂಟ್ಸ್ ಜಾಗವನ್ನು ಮಾನಸಿಕ ರೋಗಿಗಳ ಆರೈಕೆಗೆ ನೀಡುವ ಭರವಸೆಯನ್ನು ನೀಡಿದರು.

ಹೆಲ್ಪ್ ಇಂಡಿಯಾ ಫೌಂಡೇಶನ್ನಿನ ಕಚೇರಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ ಸ್ವಯಂ ಸೇವಾ ಸಂಸ್ಥೆಗಳು ಉದ್ಘಾಟನೆಗಳಿಗೆ, ಪ್ರಚಾರಗಳಿಗೆ ಮಾತ್ರ ಸೀಮಿತವಾಗಿ ದಾರಿ ತಪ್ಪುತ್ತಿದೆ. ರಾಜ್ಯ ಅಭಿವೃದ್ಧಿ ಯೋಜನೆಯಡಿ 1 ಲಕ್ಷ ಕೋಟಿ ಅನುದಾನ ಸರಕಾರದಿಂದ ಜನರ ಅಭಿವೃದ್ಧಿಗೆ ಸಿಗುತ್ತದೆ. ಇದನ್ನು ಸ್ವಯಂ ಸೇವಾ ಸಂಸ್ಥೆಗಳು ಸರಕಾರದ ಜತೆಗೆ ಜಂಟಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಪ್ರತಿ ಯೋಜನೆಗಳನ್ನು ಜನರಿಗೆ ತಲುಪಿಸಬಹುದಾಗಿದೆ. ಆದರೆ ವಿದೇಶದಿಂದ ಹಣ ಸಂಪಾದಿಸಿ, ಸಂಗ್ರಹಿಸಿ ದೇಶದ ಜನರಿಗೆ ಖರ್ಚು ಮಾಡುವುದು ಸರಿಯಲ್ಲ. ಸೇವೆಗಳಿಂದ ಜೀವನದ ಘನತೆಗೆ ಕುತ್ತು ತರುವ ಪ್ರಯತ್ನ ಆಗಬಾರದು. ಸರಕಾರದ ಸೇವೆ ಲಭ್ಯವಿರದ ಪ್ರದೇಶಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಾಚರಿಸಬೇಕಿದೆ. ಸ್ಪರ್ಧೆಯ ಮೂಲಕ ಕಾರ್ಯಾಚರಿಸುವ ಬದಲು ಜನರಿಗೆ ಪೂರಕವಾಗುವ ರೀತಿಯಲ್ಲಿ ಸಂಸ್ಥೆಗಳು ಕಾರ್ಯಾಚರಿಸುವುದರಿಂದ ಸರಕಾರದ ಯೋಜನೆಗಳು ಇಲ್ಲದ ಸಮಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸಹಕಾರಿ ಎಂದರು.

ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಧ್ಯಕ್ಷತೆ ವಹಿಸಿದ್ದರು. , ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು, ಹೆಲ್ಪ್ ಇಂಡಿಯಾ ಫೌಂಡೇಶನ್ನಿನ ಅಧ್ಯಕ್ಷ ನಾಸೀರ್ ಮೊಯ್ದೀನ್ ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ರೂಪೇಶ್ ಮಾಡ್ತಾ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪಡೆ ಹಾಗೂ ಶಿವಮೊಗ್ಗ ನರ್ಸಿಂಗ್ ಹೋಂನ ಅಧ್ಯಕ್ಷ ಹಾಗೂ ಖ್ಯಾತ ಮನೋವೈದ್ಯ ಡಾ.ಕೆ.ಎ. ಅಶೋಕ್ ಪೈ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ.ವಿಕ್ರಂ ಶೆಟ್ಟಿ, ಮನಸ್ವಿನಿ ಮಂಗಳೂರಿನ ಮಾನಸಿಕ ತಜ್ಞ ಡಾ.ರವೀಶ್ ತುಂಗಾ, ಅಲ್ಪಸಂಖ್ಯಾತ ಅಧ್ಯಕ್ಷ ಬಿ.ಎಂ.ಕುಂಞÂ, ಝುಲ್ಫೀಕರ್, ಶಬಾಝ್ ಸಮಾನ್, ಡಾ.ಪ್ರಕಾಶ್, ಅಹಮ್ಮದ್ ಅಬ್ದುಲ್ ಖಾದರ್ ಬಾವ ಮುಖ್ಯ ಅತಿಥಿಗಳಾಗಿದ್ದರು.
ಹೆಲ್ಪ್ ಇಂಡಿಯಾ ಫೌಂಡೇಶನ್ನಿನ ಕಾರ್ಯಾಧ್ಯಕ್ಷ ಅಬ್ದುಲ್ ರಾಝಿಕ್ ಉಳ್ಳಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಕೀಲ್ ತುಂಬೇಜಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

 

Exit mobile version