Site icon Ullalavani

ಮಹಿಳೆ ಸ್ವಾವಲಂಬಿಯಾದಲ್ಲಿ ಕುಟುಂಬ ಅಭಿವೃದ್ಧಿ,ಗ್ರಾಮದ ಅಭಿವೃದ್ಧಿ ಸಾಧ್ಯ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತಲಪಾಡಿ: ಕೇಂದ್ರ ಸರಕಾರ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಾವಲಂಬನೆ ಜೀವನ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಲಿದೆ. ಮಹಿಳೆ ಸ್ವಾವಲಂಬಿಯಾದಲ್ಲಿ ಕುಟುಂಬದ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಯೂ ಸಾಧ್ಯ ಎಂದು ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು , ಸ್ತ್ರೀ ಶಕ್ತಿ ಗೊಂಚಲು ಗುಂಪುಗಳು ಕೋಟೆಕಾರು ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ತಲಪಾಡಿಯ ವಿಶ್ವಾಸ್ ಆಡಿಟೋರಿಯಂನಲ್ಲಿ ಮಂಗಳವಾರ ಜರಗಿದ ಸ್ತ್ರೀಶಕ್ತಿ ಮಹಿಳಾ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳಾ ಸಂಘಗಳಲ್ಲಿ ಸ್ವಉದ್ಯೋಗ, ಸ್ವಾವಲಂಬನೆ ಪಾಠದ ಜತೆಗೆ ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವಂತೆ ಮಹಿಳೆಯರನ್ನು ಬೆಳೆಸಬೇಕು. ಎಲ್ಲಾ ಮಹಿಳೆಯರನ್ನು ಒಗ್ಗಟ್ಟಾಗಿಸುವ ಕಾರ್ಯಕ್ರಮ ನಡೆಸುವ ಸ್ತ್ರೀ ಶಕ್ತಿ ಸಂಘಗಳ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ವಹಿಸಿದ್ದರು. ತಲಪಾಡಿ ತಾಲೂಕು ಪಂಚಾಯಿತಿ ಸದಸ್ಯ ಅಬೂಬಕರ್ ಸಿದ್ದೀಕ್, ಸೋಮೇಶ್ವರ ತಾಲೂಕು ಪಂಚಾಯತ್ ಸದಸ್ಯ ರಾಮಚಂದ್ರ ಕುಂಪಲ, ಮಂಜನಾಡಿ ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್, ತಲಪಾಡಿ ಪಂಚಾಯಿತ್ ಉಪಾಧ್ಯಕ್ಷೆ ಜಯಲಕ್ಷ್ಮೀ, ಗೋಪಾಲ ಶೆಟ್ಟಿ ಅರಿಬೈಲು, ಸೋಮೇಶ್ವರ ಪಂಚಾಯಿತ್ ಸದಸ್ಯರಾದ ಪ್ರಫುಲ್ಲಾ, ಗೀತಾ, ಶೋಭಾ ಇಸ್ಮಾಯಿಲ್, ತಲಪಾಡಿ ಪಂಚಾಯತ್.ಸದಸ್ಯರಾದ ವೈಭವ್, ವಿನಯ್, ಭಾಗ್ಯಲಕ್ಷ್ಮೀ ರೈ, ಜಯಂತಿ ಪಕಳ, ಸೀತಾ, ಪುರುಷೋತ್ತಮ ಶೆಟ್ಟಿ, ಅಕ್ಷತಾ, ಲೋಲಾಕ್ಷಿ ಮುಖ್ಯ ಅತಿಥಿಯಾಗಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾದ್ಯಾಪಕಿ ಶಮಿತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅಂಗನವಾಡಿ ಕೇಂದ್ರಗಳ ಕೋಟೆಕಾರು ವಲಯದ ಮೇಲ್ವಿಚಾರಕಿ ಶಾರದಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಈ ಸಂದರ್ಭ ವಿಶೇಷ ಸಾಧನೆಗೈದ ಕೋಟೆಕಾರು ಮಾಡೂರಿನ ದೀಪ ಸ್ತ್ರೀ ಶಕ್ತಿ ಗುಂಪಿನ ಸದಸ್ಯರನ್ನು ಹಾಗೂ ನಾಟಿವೈದ್ಯೆ ಯು.ಯಸ್.ಲಲಿತಾ ಅವರನ್ನು ಸನ್ಮಾನಿಸಲಾಯಿತು.

Exit mobile version