Site icon Ullalavani

ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಕನಕದಾಸರ ನಂಟು ಇರುವ ಕರಾವಳಿಯಲ್ಲಿ ಇಂದು ದೌರ್ಜನ್ಯ, ಹಿಂಸೆಗಳೂ ಹೆಚ್ಚುತ್ತಿದ್ದು, ಇಂದಿನ ಕರಾವಳಿ ಮೊದಲಿನ ಕರಾವಳಿಯಾಗಿ ಉಳಿದಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಕನಕದಾಸರ ನೆನಪು ಮತ್ತು ಅವರ ಚಿಂತನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ `ಕನಕಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಬಹುತ್ವದ ನೆಲೆಯಲ್ಲಿ ಬೆಳೆದಿರುವಂತಹ ದೇಶವಾಗಿದ್ದು, ಇಲ್ಲಿಯ ಸಂಸ್ಕøತಿ, ಧರ್ಮ ಮುಂತಾದವುಗಳು ಬಹುತ್ವದ ಸ್ವರೂಪದಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ. ದೇಶದಲ್ಲಿ ಹಿಂದಿನಿಂದಲೂ ಜಾತಿ, ಅಧಿಕಾರ, ಶೋಷಣೆಯ ವಿರುದ್ದ ಸಂಘರ್ಷಗಳು ನಡೆದಿರುವದನ್ನು ನಾವು ಇತಿಹಾಸದ ಮೂಲಕ ಅರಿತುಕೊಳ್ಳುತ್ತೇವೆ.

ಸುಮಾರು 12ನೇ ಶತಮಾನದ ಸಮಯದಲ್ಲಿ ಶೋಷಣೆಗಳ ವಿರುದ್ದ ಧ್ವನಿ ಕೇಳಿಬಂದು ವಚನಕಾರರ ಮೂಲಕ ಪರ್ಯಾಯ ಸಂಸ್ಕøತಿಯು ಬೆಳವಣಿಗೆಗೊಂಡಿತ್ತು. ಇಂತಹ ಚಳುವಳಿಯಲ್ಲಿ ಯಾರೂ ಕೂಡಾ ಮೇಲ್ವರ್ಗದವರು ಇಲ್ಲದೆ ಹಿಂದುಳಿದ ವರ್ಗದವರೇ ಇದ್ದರು. ಇಂತಹ ಪರ್ಯಾಯ ಸಂಸ್ಕøತಿಯ ಬೆಳವಣಿಗೆಯಲ್ಲಿ ಕನಕದಾಸರ ಪಾತ್ರವೂ ಕೂಡಾ ಹಿರಿದಾದುದು ಎಂದು ಅವರು ಹೇಳಿದರು.
ವಿಭಿನ್ನ ರೂಪದ ನೆಲೆಗಳ, ಚಿಂತನೆಗಳ ರೂಪವೇ ನಮ್ಮ ಭಾರತೀಯತೆಯಾಗಿದ್ದರೂ ಇಡೀ ದೇಶದಲ್ಲೀಗ ಅಸಹನೆ, ಅಸಹಿಷ್ಣುತೆಯಂತಹ ವಾತವಾರಣ ಬೆಳೆಯುತ್ತಿರುವುದು ನಿಜವಾಗಿಯೂ ಆತಂಕಕಾರಿಯಾಗಿದೆ. ಇಂತಹ ಸಂಗತಿಗಳ ಬಗ್ಗೆ ವಿದ್ಯಾರ್ಥಿ ಸಮುದಾಯ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.

ಸಮಾನತೆಯ ಸಾರವನ್ನು ಎತ್ತಿ ಹಿಡಿದ ಕನಕದಾಸರ ಕೀರ್ತನೆಯಲ್ಲಿ ತಾತ್ವಿಕ ಚಿಂತನೆಗಳು, ಸಾಮಾಜಿಕ ವ್ಯವಸ್ಥೆಯ ಬಗೆಯನ್ನು ನಾವು ಅರಿತುಕೊಳ್ಳಬಹುದು. ಆದ್ದರಿಂದ ಇಂದಿನ ಕಾಲಕ್ಕೆ ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಡಾ.ಉದಯ ಬಾರ್ಕೂರು ಅವರು, ಕನಕದಾಸರು ಕೀರ್ತನೆಯ ಮೂಲಕ ಸಮಾಜದ ಪರಿವರ್ತನೆಗಾಗಿ ಮೌನಕ್ರಾಂತಿಯ ಮೂಲಕ ಹೋರಾಡಿದ ಮಹಾನುಭವರಾಗಿದ್ದಾರೆ. ಅಂದಿನ ಕಾಲದಲ್ಲಿ ದಾಸಪರಂಪರೆಯಲ್ಲಿ ಹುಟ್ಟಿದ ಪ್ರತಿಭಟನೆ, ಹೋರಾಟದ ಪರಿಣಾಮವಾಗಿ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವಿದ್ಯಾರ್ಥಿಗಳೂ ವ್ಯಾಸಾಂಗ ಮಾಡುವಂತಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕನಕದಾಸ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಕನಕದಾಸ ಸಂಶೋಧನಾ ಕೇಂದ್ರದ ಸಂಶೋಧನಾ ಸಹಾಯಕ ನಿತಿನ್ ಕಾರ್ಯಕ್ರಮ ನಿರೂಪಿಸಿ, ವಸಂತ್ ವಂದಿಸಿದರು. ವಿದ್ಯಾರ್ಥಿನಿ ನಂದಿನಿ ಕನಕದಾಸರ ಕೀರ್ತನೆಯನ್ನು ಹಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಕನಕದಾಸ ಕೀರ್ತನ ಗಾಯನದ ಸ್ಪರ್ಧಾ ಕಾರ್ಯಕ್ರಮವು ನಡೆಯಿತು.

Exit mobile version