ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ತಪ್ಪು ಮಾಡುವ ವಿದ್ಯಾರ್ಥಿಗಳನ್ನು ತಿದ್ದಬೇಕಾದ ವಿಶ್ವವಿದ್ಯಾನಿಲಯಗಳು ತಪ್ಪು ಮಾಡುತ್ತಿರುವುದು ಶಿಕ್ಷಣ ವ್ಯವಸ್ಥೆಯ ದುರಾವಸ್ಥೆಯನ್ನು ಎತ್ತಿ ತೋರಿಸುತ್ತಿದ್ದು, ಫಲಿತಾಂಶದಲ್ಲಿ ಗೊಂದಲ ಉಂಟು ಮಾಡಿ ಬಡ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುವ ಅಧ್ಯಾಪಕರುಗಳ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ತಫ್ಸೀಕ್ ಆಗ್ರಹಿಸಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯ ಫಲಿತಾಂಶದ ಗೊಂದಲಮಯ ಫಲಿತಾಂಶವನ್ನು ಸರಿಪಡಿಸುವಂತೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಕ್ಯಾಂಪಸ್ ಫ್ರೆಂಟ್ ಆಪ್ ಇಂಡಿಯಾ ಜಿಲ್ಲಾ ಘಟಕಾ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ವೆಬ್ ಸೈಟಿನಲ್ಲಿ ಪ್ರಕಟಿಸಿದಂತಹ ಫಲಿತಾಂಶ ಸಂಪೂರ್ಣ ಗೊಂದಲಮಯವಾಗಿದೆ. ವಿದ್ಯಾರ್ಥಿಗಳಲ್ಲಿ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಸಿದೆ. ಪ್ರತೀ ಬಾರಿ ಉನ್ನತ ಶ್ರೇಣಿಗಳಲ್ಲಿ ತೇರ್ಗಡೆಗೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಏಕಾಏಕಿ ಕಡಿಮೆ ಅಂಕಗಳು ದೊರಕಿದೆ. ಅಲ್ಲದೆ ಆರು ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ ಹನ್ನೊಂದು ವಿಷಯಗಳ ಫಲಿತಾಂಶವನ್ನು ವಿವಿ ವೆಬ್ ಸೈಟಿನಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ.
ಕೆಲ ವಿದ್ಯಾರ್ಥಿಗಳ ಫಲಿತಾಂಶ ಇಂದಿನವರೆಗೂ ಪ್ರಕಟವಾಗಿಲ್ಲ. ವಿ.ವಿ ಫಲಿತಾಂಶಗಳ ಪ್ರಕಟಣೆಯನ್ನು ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡಿರುವುದು ವಿ.ವಿ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಬಗ್ಗೆ ವಿ.ವಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಮಸ್ಯೆ ಬಗೆಹರಿಸಲು ಕೆಲ ದಿನಗಳ ಕಾಲಾವಕಾಶವನ್ನು ಕೇಳಿದ್ದರು. ಅದರಂತೆ ವಿ.ವಿ ಅಧಿಕಾರಿಗಳು ಪತ್ರಿಕಾಗೋಷ್ಟಿ ಕರೆದು ಮಾ.12ರವರೆಗೆ ಅವಧಿ ಕೇಳಿದ್ದರು. ಅವಧಿ ಮುಗಿದು ಫಲಿತಾಂಶ ಬರಲಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೂ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಆಡಳಿತ ಸೌಧದ ಮುಂದೆ ಧರಣಿ ಕುಳಿತ ವಿದ್ಯಾರ್ಥಿಗಳು ಉಪಕುಲಪತಿಗಳು ಬಾರದೇ ಇದ್ದಲ್ಲಿ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಾಗ ಪ್ರತಿಭಟನಾ ಸ್ಥಳಕ್ಕೆ ಮಂಗಳೂರು ವಿ.ವಿ ಕುಲಸಚಿವರು ಭೇಟಿ ನೀಡಿ ಪ್ರೊ.ಟಿ.ಡಿ.ಕೆಂಪರಾಜು ಮಾತನಾಡಿ ಖಾಸಗಿ ಸಂಸ್ಥೆಯವರು ಮೌಲ್ಯಮಾಪನ ನಡೆಸುವುದಿಲ್ಲ, ಅಧ್ಯಾಪಕರುಗಳೇ ಮೌಲ್ಯಮಾಪನ ನಡೆಸುವವರು. ಫಲಿತಾಂಶದ ಎಂಟ್ರಿಯನ್ನು ಖಾಸಗಿ ಸಂಸ್ಥೆಯವರು ಮಾಡಿದ್ದಾರೆ. ಅದರಲ್ಲಿ ಹಲವು ಗೊಂದಲಗಳು ಉಂಟಾಗಿದೆ. ಅಧ್ಯಾಪಕರುಗಳಿಂದ ತಪ್ಪುಗಳಾಗಿದ್ದಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಣ್ಣ ಗೊಂದಲಗಳು ಇದ್ದಲ್ಲಿ ಆಯಾಯ ಕಾಲೇಜುಗಳಲ್ಲೇ ಸರಿಪಡಿಸುವಂತೆ ಸೂಚನೆಯನ್ನು ಹೊರಡಿಸಲಾಗಿದೆ ಎಂದರು.
ಈ ಸಂದರ್ಭ ಸಿ ಎಫ್ ಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತುಫ್ವೆಲ್, ಸಾಹುಲ್ ಹಮೀದ್, ಮಹಮ್ಮದ್ ಇರ್ಷಾದ್, ಅಶ್ವಾನ್ ಸಾದಿಕ್ ಮತ್ತು ನಿಝಾಮುದ್ದೀನ್ ಉಪಸ್ಥಿತರಿದ್ದರು.