Site icon Ullalavani

ವಿದ್ಯಾರ್ಥಿಗಳನ್ನು ಖೈದಿಗಳಿಗಿಂತ ಕಡೆಯಾಗಿ ನೋಡುತ್ತಿರುವ ಸರಕಾರ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:ಅಪರಾಧ, ಕೊಲೆ, ಅತ್ಯಾಚಾರ ನಡೆಸಿ ಜೈಲುಪಾಲಾಗುವ ಅಪರಾಧಿಗಳಿಗೆ ದಿನಕ್ಕೆ ರೂ.80 ಹಣವನ್ನು ವ್ಯಯಿಸುವ ಸರಕಾರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ದಿನಕ್ಕೆ ಕೇವಲ ರೂ. 12 ಹಣವನ್ನು ವ್ಯಯಿಸುವ ಮೂಲಕ ವಿದ್ಯಾರ್ಥಿಗಳನ್ನು ಖೈದಿಗಳಿಗಿಂತ ಕಡೆಯಾಗಿ ನೋಡಲಾಗುತ್ತಿದೆ ಎಂದು ಜಿಲ್ಲಾ ಎಸ್ ಎಫ್ ಐ ಅಧ್ಯಕ್ಷ ನಿತಿನ್ ಕುತ್ತಾರ್ ಖೇದ ವ್ಯಕ್ತಪಡಿಸಿದರು.

ಅವರು ಎಸ್ ಎಫ್ ಐ ಉಳ್ಳಾಲ ವಲಯದ ಆಶ್ರಯದಲ್ಲಿ ರಾಜ್ಯದ ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಆಗ್ರಹಿಸಿ ಉಳ್ಳಾಲದ ಅಬಕ್ಕ ವೃತ್ತದ ಸಮೀಪ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು, ಶಿಕ್ಷಣ ನೀತಿಯೇ ಗೊಂದಲಮಯವಾಗಿದೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳೇ ಕಾಣೆಯಾಗುತ್ತಿದ್ದಾರೆ. ಶಾಲಾ ಸಿಬ್ಬಂದಿಗೆ ಸರಿಯಾದ ವೇತನವನ್ನು ನೀಡದೆ ವಿದ್ಯಾರ್ಥಿಗಳಿಂದ ಅಭಿವೃದ್ಧಿ ಶುಲ್ಕವನ್ನು ಪಡೆಯುವುದರ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂಜರಿಯುವ ವಾತಾವರಣ ನಿರ್ಮಾಣವಾಗಿದೆ. ಸರಕಾರಿ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಕಡಿಮೆಯಿದ್ದು, ಖಾಸಗಿ ಮತ್ತು ವಿದೇಶಿ ವಿ.ವಿಗಳಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಖಾಸಗಿ ಕಂಪೆನಿಗಳಿಗೆ ನೀಡುವ ಸಹಕಾರ ಶಿಕ್ಷಣ ಕ್ಷೇತ್ರಕ್ಕೆ ಸರಕಾರದಿಂದ ಸಿಗುತ್ತಿಲ್ಲ ಎಂದ ಅವರು ಕೇಂದ್ರದ ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.2 ಅನುದಾನವನ್ನು ಮೀಸಲಿಡುವ ಮೂಲಕ ನಿರಾಶಾದಾಯಕವಾಗಿದೆ. ಸಾಕ್ಷರತೆಯಲ್ಲಿ ರಾಜ್ಯ ಹಿನ್ನಡೆಯನ್ನು ಕಂಡಿದೆ.

ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಈವರೆಗೂ ಸಿಗುತ್ತಿದ್ದ ಸ್ಕಾಲರ್‍ಶಿಪ್ ವ್ಯವಸ್ಥೆಯನ್ನು ಆನ್ ಲೈನ್ ಮಾಡುವ ಮೂಲಕ ಜನವರಿ ತಿಂಗಳಲ್ಲಿ ಸಿಗಬೇಕಾದ ಸ್ಕಾಲರ್ ಶಿಪ್ ಮಾಚ್ ್ ತಿಂಗಳಾದರೂ ವಿದ್ಯಾರ್ಥಿಗಳ ಕೈಸೇರಿಲ್ಲ. ರಾಜ್ಯ ಸರಕಾರ ಶೇ.30 ರಷ್ಟು ಶಿಕ್ಷಣಕ್ಕೆ ಅನುದಾನವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಬಜೆಟ್ ಆಶಾದಾಯಕವಾಗಿರಬೇಕು. ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ಇರುವ ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಉಳ್ಳಾಲ ವಲಯ ಅಧ್ಯಕ್ಷ ಹಂಝ ಕಿನ್ಯಾ, ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಅಶ್ವೀದ್ ನಝೀಂ, ಫರಾಝ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Exit mobile version