ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ಹೆತ್ತವರಿಗೆ, ಶಿಕ್ಷಕರಿಗೆ ಮಕ್ಕಳ ಬೆಳವಣಿಗೆ ಕುರಿತ ಮಾಹಿತಿ ಕಾರ್ಯಕ್ರಮ ಅವಶ್ಯಕ, ಎಳೆ ವಯಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಅರಿವು ಮೂಡಿಸಿದಾಗ ಆತ ಒಳ್ಳೆಯ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಭಿಪ್ರಾಯಪಟ್ಟರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕರಿಗಳ ಕಚೇರಿ, ದಕ್ಷಿಣ ವಲಯ ಶಿಕ್ಷಣ ಸಂಪನ್ಮೂಲ ಕೇಂದ್ರ, ಪಡಿ ಸಂಸ್ಥೆ ಮಂಗಳೂರು ಇವರ ಸಹಯೋಗದಲ್ಲಿ ಬಂಟ್ವಾಳದ ಎಸ್.ಎಂ ಚಾರಿಟೇ¨ಲ್ ಟ್ರಸ್ಟ್ ಮತ್ತು ಸೋಮೇಶ್ವರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಶನಿವಾರ ಪಿಲಾರಿನ ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಗು ಸ್ನೇಹಿ ಶಾಲೆ ಮತ್ತು ಮಗು ಸ್ನೇಹಿ ಪಂಚಾಯತ್ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ದಕ್ಷಿಣ ವಲಯದ ಸಮನ್ವಯ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಮಕ್ಕಳಲ್ಲಿ ಇರುವ ಹಿಂಜರಿಕೆಯಿಂದ ಸಮಸ್ಯೆಗಳು ಬೆಳಕಿಗೆ ಬರುತ್ತಿಲ್ಲ. ಶಾಲಾ ಎಸ್ ಡಿ ಎಂಸಿ ಮತ್ತು ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡಾಗ ಶಾಲಾ ಆಡಳಿತ ಮಂಡಳಿ ಮಕ್ಕಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೆಲಸ ಮಾಡಬಹುದು. ಗುಣಾತ್ಮಕ ಶಿಕ್ಷಣ ಮತ್ತು ಕಲಿಕೆ ಕಡೆಗೆ ಸೆಳೆಯುವ ಪ್ರಯತ್ನ ಶಿಕ್ಷಕರಿಂದ ಆಗಬೇಕಿದೆ. ಹೆಚ್ಚುಮಕ್ಕಳನ್ನು ಒತ್ತಡಗಳಿಗೆ ಒಳಪಡಿಸದೆ ಅವರನ್ನು ಸರಳವಾಗಿ ಆಟವಾಡಲು ಬಿಟ್ಟು ಬದುಕುವ ಕಲೆಯನ್ನು ಕಲಿಸುವಮತ್ತು ಬೆಳೆಸುವ ಕಾರ್ಯ ಶಿಕ್ಷಕ ಮತ್ತು ಹೆತ್ತವರಿಂದ ಆಗಬೇಕಿದೆ ಎಂದರು.
ಎಸ್.ಎಂ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ದಯಾನಂದ ಕೆ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸೋಮೇಶ್ವರ ಪಂ. ಸದಸ್ಯರಾದ ದೀಪಕ್ ಪಿಲಾರ್, ಉದಯ ಗಟ್ಟಿ ಪಿಲಾರು, ಪಡಿ ಸಂಸ್ಥೆಯ ಜಿಲ್ಲಾ ಒಕ್ಕೂಟದ ಸಂಯೋಜಕಿ ಕಸ್ತೂರಿ ಬೊಳುವಾರು, ಪಿಲಾರು ಶಾಲೆಯ ಇಮ್ತಿಯಾಝ್, ಉಚ್ಚಿಲ ಗುಡ್ಡೆ ಶಾಲೆಯ ಸೆಕಿನಾ ಭಾನು, ಸಂಪನ್ಮೂಲ ವ್ಯಕ್ತಿಯಾಗಿ ದುರ್ಗಾಪ್ರಸಾದ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷ ಹಸನ್ ಸಾಹೇಬ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಆಶಾಲತಾ ಸುವರ್ಣ, ಕುಂಪಲ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ ಕುಂಪಲ, ಪಿಲಾರು ಶಾಲೆ ಮುಖ್ಯೋಪಾಧ್ಯಾಯ ರೋಹಿತಾಶ್ವ ಪಿಲಾರು, ಉಚ್ಚಿಲಗುಡ್ಡೆ ಶಾಲೆ ಮುಖ್ಯೋಪಾಧ್ಯಾಯಿನಿ ವಸಂತಿ ಉಪಸ್ಥಿತರಿದ್ದರು.
ಉಷಾ ನಾಯ್ಕ್ ಸ್ವಾಗತಿಸಿದರು. ಕಮಲಾ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಆಶಾಲತಾ ಬೇಕಲ್ ವಂದಿಸಿದರು.