ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಈ ನೆಲದ ಅನ್ನ ತಿಂದು, ನೀರು ಕುಡಿದು ಕೆಲ ವಿಕೃತ ಮನಸ್ಸುಗಳು ದೇಶವನ್ನು ತುಂಡರಿಸುವ ಮಾತುಗಳನ್ನು ಆಡಿದರೆ ಯಾವ ದೇಶಪ್ರೇಮಿ ತಾನೆ ಸುಮ್ಮನಿರಲು ಸಾಧ್ಯ ಎಂದು ಕನ್ನಡ ವಿಭಾಗದ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಹೇಳಿದರು.
ದೆಹಲಿಯ ಜೆಎನ್‍ಯು ವಿವಿಯಲ್ಲಿ ನಡೆದ ರಾಷ್ಟ್ರವಿರೋಧಿ ಹೇಳಿಕೆಯನ್ನು ವಿರೋಧಿಸಿ ಕೊಣಾಜೆಯ ಮಂಗಳೂರು ವಿವಿಯ ಪ್ರವೇಶದ್ವಾರದಿಂದ ಮಂಗಳಾ ಸಭಾಂಗಣದ ವರೆಗೆ ರಾಷ್ಟ್ರ ಧ್ವಜ ಹಿಡಿದುಕೊಂಡು ಬುಧವಾರ ನಡೆದ ತಿರಂಗಾ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೊ. ಬಾಲಕೃಷ್ಣ ಮಾತನಾಡಿ ದೇಶದಲ್ಲಿ ನಮ್ಮಿಂದ ಆರಿಸಿಹೋದ ಮೂರ್ಖ ಶಾಸಕರು ಇರಬಹುದು ಅಥವಾ ದೇಶಕ್ಕಾಗಿ ಶ್ರಮಿಸುವ ಒಳ್ಳೆಯ ಶಾಸಕರು ಇರಬಹುದು. ದೇಶದ ವಿರುದ್ಧವಾಗಿ ಯಾರೇ ಮಾತನಾಡಿದರು ಅಂತವರನ್ನು ಬೆಂಬಲಿಸದೇ ಶಾಸಕಾಂಗ,ನ್ಯಾಯಾಂಗಗಳಿಗೆ ತಿಳಿಹೇಳುವ ಕೆಲಸ ಮಾಡಬೇಕಿದ್ದು ಇಂತಹ ಕೆಲಸವನ್ನು ನ್ಯಾಯಾಂಗ ಹಾಗೂ ಇತರ ಸಂಘಟನೆಗಳು ಈಗಾಗಲೇ ಮಾಡುತ್ತಿದೆ. ಇಂತವರಿಗೆ ಬೆಂಬಲವನ್ನು ಮಂಗಳೂರು ವಿಶ್ವವಿದ್ಯಾನಿಲಯ ನೀಡುತ್ತದೆ ಎಂದರು.
ಈ ತಿರಂಗಾ ರ್ಯಾಲಿಯಲ್ಲಿ ವಿದ್ಯಾರ್ಥಿ ನಾಯಕರುಗಳಾದ ಪ್ರಭಾಕರ್, ಸಂದೇಶ, ಶ್ಯಾಮ್‍ಪ್ರಸಾದ್ ಮತ್ತಿರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 100 ಅಡಿ ಉದ್ದದ ತಿರಂಗಾದ ರ್ಯಾಲಿಯೊಂದಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ವಿವಿಯ ಮಂಗಳಾ ಸಭಾಂಗಣದ ಬಳಿ ಜಮಾಯಿಸಿದರು.