Site icon Ullalavani

ಟೂರಿಸ್ಟ್ ವಾಹನ ಮಾಲೀಕ, ಚಾಲಕರ ಉಪವಾಸ ಸತ್ಯಾಗ್ರಹ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಟೂರಿಸ್ಟ್ ವಾಹನಗಳಿಗೆ ಸಿಗುವ ಬಾಡಿಗೆಗೆ ಕಲ್ಲು ಹಾಕುವ ಕೆಲಸವನ್ನು ಪರ್ಮಿಟ್ ಇರುವ ವಾಹನಗಳು ಮಾಡುತ್ತಿದ್ದರೂ, ಅದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಅವರ ಜತೆಗೆ ಶಾಮೀಲಾಗಿ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವುದರ ಜತೆಗೆ ಜಿಲ್ಲೆಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ನಿನ ಜಿಲ್ಲೆ ಅಧ್ಯಕ್ಷ ಮೋನಪ್ಪ ಭಂಡಾರಿ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ವತಿಯಿಂದ ಪರವಾನಿಗೆ ಇಲ್ಲದ ಬಸ್ಸುಗಳು ಮತ್ತು ಖಾಸಗಿ ಕಾರುಗಳು ಪ್ರವಾಸಿ ಬಾಡಿಗೆ ಮಾಡುವುದರ ವಿರುದ್ಧವಾಗಿ ಮಂಗಳವಾರ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.

ಟ್ರಿಪ್ ನಿಲ್ಲಿಸಿ ಬಾಡಿಗೆ ನಡೆಸುವ ಬಸ್ಸುಗಳ ಪರ್ಮಿಟ್ ರದ್ದುಗೊಳಿಸಬೇಕಾದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸರಕಾರಿ ಅಧಿಕಾರಿಗಳು ಬಸ್ಸು ಮಾಲೀಕರ ಜತೆಗೆ ಶಾಮೀಲಾಗಿ ಲಂಚ ಪಡೆದುಕೊಂಡು ಬೇಜವಾಬ್ದಾರಿ ನೀತಿ ಅನುಸರಿಸುತ್ತಿದ್ದಾರೆ, ಇದರಿಂದ ಬ್ಯಾಂಕಿನಿಂದ ಲಕ್ಷಾಂತರ ಸಾಲ ಪಡೆದು ವ್ಯವಸ್ಥಿತವಾಗಿ ತೆರಿಗೆ ಮತ್ತು ವಿಮೆ ಕಟ್ಟುವ ಟೂರಿಸ್ಟ್ ವಾಹನ ಚಾಲಕರು ಹಾಗೂ ಮಾಲೀಕರು ಬಾಡಿಗೆ ಇಲ್ಲದೆ ದಿನದೂಡುವ ಅನಿವಾರ್ಯತೆ ಇದೆ. ಸಮಸ್ಯೆ ಕುರಿತು ಆರ್ ಟಿಓ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಗಳೂರು ಮತ್ತು ಕಂಕನಾಡಿ ರೈಲ್ವೇ ನಿಲ್ದಾಣಗಳಲ್ಲಿ ಅನುಮತಿಯಿಲ್ಲದೆ ಬಾಡಿಗೆ ನಡೆಸುವ ಖಾಸಗಿ ವಾಹನಗಳ ತಡೆದು ಪ್ರತಿಭಟನೆ ಮತ್ತು ವಾಹನಗಳ ಟಯರಿನ ಗಾಳಿ ತೆಗೆದು ವಾಹನಗಳು ಮುಂದೆ ಹೋಗದಂತೆ ನೋಡುತ್ತೇವೆ ಎಂದು ಎಚ್ಚರಿಸಿದ ಅವರು ಸ್ವಂತಕ್ಕಾಗಿ ಬಳಸುವ ಕಾರನ್ನು ಟೂರಿಸ್ಟ್ ಮಾಡುವುದು ಕಾನೂನು ವಿರೋಧಿ ಚಟುವಟಿಕೆ. ಅದನ್ನು ಪೊಲೀಸ್ ಇಲಾಖೆ ಕಂಡರೂ ಕಣ್ಣಿದ್ದೂ ಕುರುಡರಂತೆ ಮಾಡುತ್ತಿರುವುದು ಖೇದನೀಯ. ಇತೀಚೆಗೆ ಜಿಲ್ಲಾಧಿಕಾರಿಗಳು ಟೂರಿಸಂ ಹೆಸರಿನಲ್ಲಿ ಹಲವು ವಾಹನಗಳನ್ನು ವಿತರಿಸಿದ್ದಾರೆ. ಆದರೆ ಟೂರಿಸ್ಟ್ ವಾಹನ ಚಾಲಕರ ಮೂಲ ಸಮಸ್ಯೆಗೆ ಯಾವುದೇ ಕ್ರಮಕೈಗೊಳ್ಳದೆ ಜಿಲ್ಲಾಧಿಕಾರಿ, ಮಂತ್ರಿಗಳು ಹೇಳಿದಂತೆ ಪ್ರಚಾರಕ್ಕಾಗಿ ನಡೆಸುವ ಕಾರ್ಯಕ್ರಮದ ಬದಲು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ. ತೊಕ್ಕೊಟ್ಟುವಿನಲ್ಲಿ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ನಡೆಸಲು ತೀರ್ಮಾನಿಸಿ ದಿನ ನಿಗದಿ ಮಾಡಲಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ದಿನೇಶ್ ಕುಂಪಲ ಮಾತನಾಡಿ ದಪ್ಪ ಚರ್ಮದ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಹೇಳಿದರೂ ಈವರೆಗೆ ಯಾವುದೇ ಪ್ರಯೋಜನಾವಗದೇ ಇರುವುದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಬಾಡಿಗೆ ಇಲ್ಲದೆ ಉಪವಾಸ ಇರುವ ಚಾಲಕರಿಗೆ ಒಂದು ದಿನದ ಉಪವಾಸ ಸತ್ಯಾಗ್ರಹ ದೊಡ್ಡ ವಿಷಯವಲ್ಲ. ಹಿಂದೆ ರೈತರು ದೇಶದ ಬೆನ್ನೆಲುಬು ಆಗಿದ್ದರೆ, ಸದ್ಯ ಚಾಲಕರೇ ಬೆನ್ನೆಲುಬು ಆಗಿದ್ದಾರೆ. ಚಾಲಕ ವರ್ಗ ಒಂದು ದಿನ ನಿದ್ರೆ ಮಾಡಿದರೆ ದೇಶದ ಸ್ಥಿತಿ ಹದಗೆಡಲಿದೆ. ಚಾಲಕರ ನಿಂದಿಸಬೇಡಿ, ಅವರ ಹಕ್ಕನ್ನು ವಿರೋಧಿಸಬೇಡಿ. ವಿದೇಶದಲ್ಲಿ ಇರುವವರು ಒಂದು ತಿಂಗಳ ಕಾಲ ಖಾಸಗಿ ಕಾರು ರೆಂಟ್ ಕಾರ್ ವ್ಯವಸ್ಥೆಯಲ್ಲಿ ಪಡೆದು ತಿಂಗಳ ಕಾಲ ಬಾಡಿಗೆ ಕೊಟ್ಟರೆ, ಆನ್‍ಲೈನ್ ಕಾರು ಬಾಡಿಗೆ ನೀಡುವವರು ಇನ್ನೊಂದೆಡೆ ಟೂರಿಸ್ಟ್ ವಾಹನ ಚಾಲಕರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಮಾಡುತ್ತಿರುವುದು ಖಂಡನೀಯ ಎಂದರು.

ಈ ಸಂದರ್ಭ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಉಳ್ಳಾಲ ವಲಯದ ಅಧ್ಯಕ್ಷ ಪ್ರಮೋದ್ ಉಳ್ಳಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲಾಕ್ಷ, ಉಳ್ಳಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನವೀನ್, ದೇವೀಶ್ ಸರಳಾಯ, ನವೀನ್ ಕುಮಾರ್, ಭಗವಾನದಾಸ್ ಸುಧಾಕರ್ ಪೂಜಾರಿ, ಪ್ರಶಾಂತ್ ಆಳ್ವ , ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಫಾರುಕ್ ಉಳ್ಳಾಲ್, ಯು.ಹೆಚ್.ಫಾರುಕ್ ಮೊದಲಾದವರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

`ಸಭೆ ನಡೆಸಿ ಎಚ್ಚರಿಸಿದ್ದೇವೆ’
ಸ್ಥಳಕ್ಕೆ ಭೇಟಿ ನೀಡಿದ ಆರ್‍ಟಿಓ ಎ.ಜಿ ಹೆಗ್ಡೆ ಮಾತನಾಡಿ ಪ್ರತಿಭಟನೆ ವಿಚಾರ ತಿಳಿದು ಬಸ್ಸು ಮಾಲೀಕರ ಸಂಘವನ್ನು ಕರೆದು ಸಭೆ ನಡೆಸಿದ್ದೇನೆ. ಅಲ್ಲದೆ ಮುಂದೆ ಬಸ್ಸುಗಳನ್ನು ತೆರಳದಂತೆ ಎಚ್ಚರಿಕೆ ನೀಡಿದ್ದೇನೆ. ಅದರಂತೆ ಮಾಲೀಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿಗೆ ಒಂದು ಲಕ್ಷ
ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ ಟೂರಿಸ್ಟ್ ಚಾಲಕ ಮತ್ತು ಮಾಲಕರ ಸಂಘದವರ ಜತೆಗೆ ಸಮಸ್ಯೆ ಬಗ್ಗೆ ವಿವರಿಸಲು ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಸಂದರ್ಭ ಜತೆಯಲ್ಲಿದ್ದು, ಸಮಸ್ಯೆ ಬಗ್ಗೆ ವಿವರಿಸುತ್ತೇನೆ. ಅಲ್ಲದೆ ತೊಕ್ಕೊಟ್ಟು ಪಾರ್ಕಿನಲ್ಲಿ ಚಾಲಕರಿಗೆ ಕುಡಿಯುವ ನೀರಿಗೆ ರೂ. 1 ಲಕ್ಷ ಅನುದಾನ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.

Exit mobile version