Site icon Ullalavani

ಅಪಘಾತಕ್ಕೀಡಾಗಿ ಗಾಯಗೊಂಡ ಯುವಕನಿಗೆ ನೆರವು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಅಸೈಗೊಳಿ: ಇತ್ತೀಚಿಗೆ ಫೇಸ್‍ಬುಕ್, ವಾಟ್ಸ್ ಆ್ಯಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರು ತಪ್ಪು ದಾರಿ ಹಿಡಿಯುವುತ್ತಿರುವ ಉದಾಹರಣೆ ಬಹಳಷ್ಟು ಇದೆ. ಆದರೆ ಕೆಲವೊಮ್ಮೆ ಇಂತಹ ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸಗಳಿಗೆ ಉಪಯೋಗವಾಗುತ್ತಿರುವುದನ್ನು ನಾವು ಕಾಣಬಹುದು. ಕಳೆದ ಕೆಲವು ದಿನಗಳ ಹಿಂದೆ ಬೈಕ್ ಅಪಘಾತವಾಗಿ ಆಸ್ಪತ್ರೆಯಲ್ಲಿ ಗಂಭೀರವಾಗಿದ್ದ ಬಡ ಕುಟುಂಬದ ಯುವಕನಿಗೆ ಹತ್ತಾರು ಯುವಕರು ಸೇರಿಕೊಂಡು ರಚಿಸಿದ್ದ ವಾಟ್ಸ್ ಆ್ಯಪ್ ಬಳಗವೊಂದು ಮಾನವೀಯತೆಯ ನೆಲೆಯಲ್ಲಿ ಆತನ ನೆರವಿಗೆ ನಿಂತು ಆರ್ಥಿಕ ಸಹಾಯ ಮಾಡಿದೆ.

ಅಸೈಗೊಳಿಯ ಫರ್ನಿಚರ್ ಅಂಗಡಿಯೊಂದರಲ್ಲಿ ಮರದ ಕೆಲಸ ಮಾಡಿಕೊಂಡಿದ್ದ ಪಾವೂರಿನ ದೀಕ್ಷಿತ್ ಎಂಬ ಯುವಕ ಇತ್ತೀಚೆಗೆ ಬೈಕ್ ಅವಘಡ ಸಂಭವಿಸಿ ಆಸ್ಪತ್ರೆಗೆ ದಾಖಲಾಗಿದ್ದ. ಅಪಘಾತದಲ್ಲಿ ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದು ಗಂಭೀರ ಗಾಯವಾಗಿತ್ತು. ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೀಕ್ಷಿತ್‍ನನ್ನು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೊಲಸೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಹಣ ಕಟ್ಟಲು ಆತನ ಮನೆಯವರು ಪರದಾಡುತ್ತಿದ್ದಾಗ ಯುವಕರ ಶಿವಾಜಿ ಸೇನೆ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಅವರಿಗೆ ಸಹಾಯ ಹಸ್ತದೊಂದಿಗೆ 25 ಸಾವಿರ ನಗದನ್ನು ನೀಡಿ ಮಾನವೀಯತೆ ಮೆರೆದಿದೆ.

ಕಳೆದ ಕೆಲವು ವರ್ಷಗಳ ಹಿಂದೆ ದೀಕ್ಷಿತ್ ತಂದೆಯನ್ನು ಕಳೆದುಕೊಂಡಿದ್ದ. ತಾಯಿ ಬೀಡಿ ಕಟ್ಟುವ ವೃತ್ತಿಯಲ್ಲಿದ್ದಾರೆ. ಒರ್ವ ಅಣ್ಣ ಸಣ್ಣ ಪುಟ್ಟ ಕೆಲಸದಲ್ಲಿದ್ದಾರೆ. ಇಡೀ ಕುಟುಂಬಕ್ಕೆ ಇವರ ದುಡಿಮೆಯೇ ಆಧಾರವಾಗಿತ್ತು. ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ರೋಹಿತ್ ಎಂಬವರು ಶಿವಾಜಿ ಸೇನೆ ಎಂಬ ಹೆಸರಿನಲ್ಲಿ ರಚಿಸಿದ ಗ್ರೂಪ್‍ನಲ್ಲಿದ್ದ ಭುವನೇಂದ್ರ, ಸತೀಶ್, ಕಿಶೋರ್, ನವೀನ್, ವೆಂಕಟೇಶ್, ಯೋಗಿಶ್, ಲೋಹಿತ್, ದಿನಕರ್, ದಿನಕರ್, ಪದ್ಮಪ್ರಸಾದ್, ಸಂದೀಪ್, ದೀಪಕ್, ವೇಣುಗೋಪಾಲ್, ಪ್ರೇಮರಾಜ್, ಸಾತ್ವಿಕ ಎಂಬವರು ಒಟ್ಟು ಸೇರಿ ಸಂಗ್ರಹಿಸಿದ 25 ಸಾವಿರ ರೂ ನಗದನ್ನು ದೀಕ್ಷಿತ್‍ನ ತಾಯಿ ಲತಾ ಅವರಲ್ಲಿ ಕೊಟ್ಟು ಆಸ್ಪತ್ರೆಯ ಬಿಲ್ ಕಟ್ಟಲು ನೆರವಾಗಿದ್ದಾರೆ.

Exit mobile version