ಅಂಬ್ಲಮೊಗರು : ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ತಾವೆಷ್ಟು ಸ್ಥಾನ ಗಳಿಸಿದ್ದೇವೆ ಎನ್ನುವ ಚಿಂತನೆಯಲ್ಲಿ ಮಗ್ನವಾಗಿದೆ. ಆದರೆ ಸಿಪಿಐಎಂ ಮತ್ತು ಅದರ ಸಹ ಸಂಘಟನೆಗಳು ಗ್ರಾಮೀಣ ಪ್ರದೇಶದ ಕಾರ್ಮಿಕರ ಪರ ಹೋರಾಟ ನಡೆಸುವ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದು, ಇದೇ ಇತರ ರಾಜಕೀಯ ಪಕ್ಷಗಳಿಗೆ ಮತ್ತು ಸಿಪಿಐಎಂ ಮತ್ತು ಅದರ ಸಹ ಸಂಘಟನೆಗಳಿಗಿರುವ ವ್ಯತ್ಯಾಸ ಎಂದು ಕೋಟೆಕಾರಿನ ಸರ್ಕಲ್ ಬೀಡಿ ಲೇಬರ್ ಯೂನಿಯನ್‍ನ ಕಾರ್ಯದರ್ಶಿ ಜಯಂತ್ ಉಳ್ಳಾಲ್ ಅಭಿಪ್ರಾಯಪಟ್ಟರು.
ಅಂಬ್ಲಮೊಗರು ಪಂಚಾಯತ್ ವ್ಯಾಪ್ತಿಯಲ್ಲಿ ಬೀಡಿ ಕೈಗಾರಿಕೆ ಮುಚ್ಚಲ್ಪಟ್ಟರೆ ಅದಕ್ಕೆ ಬದಲಿ ಉದ್ಯೋಗ ನೀಡುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನಡೆದ ಸ್ಥಳೀಯ ಸಂಸ್ಥೆಯಲ್ಲಿ ಬೀಡಿ ಕಾರ್ಮಿಕರ ಹೆಸರು ನೋಂದಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಮಿಕರ ವಿವರದ ಅರ್ಜಿಗಳನ್ನು ಅಂಬ್ಲಮೊಗರು ಪಂಚಾಯತ್ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಆರೋಗ್ಯಕ್ಕೆ ಹಾನಿಕರ ಎನ್ನುವ ನಿಟ್ಟಿನಲ್ಲಿ ಬೀಡಿ ಕೈಗಾರಿಕೆಗಳನ್ನು ಬಂದ್ ಮಾಡುವ ಚಿಂತನೆ ನಡೆಸುತ್ತಿದೆ. ಇಂದು ರೈತರು ಆತ್ಮಹತ್ಯೆ ನಡೆಸುತ್ತಿದ್ದು, ಇದೇ ರೀತಿ ಬೀಡಿ ಕೈಗಾರಿಕೆ ಸ್ಥಗಿತಗೊಂಡರೆ ಬೀಡಿ ಕಾರ್ಮಿಕರು ಆತ್ಮಹತ್ಯೆ ನಡೆಸುವ ಸಾಧ್ಯತೆ ಇದೆ. ಈ ಹಿಂದೆ ಸಿಐಟಿಯು ಹೋರಾಟದ ಫಲವಾಗಿ ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಬೀಡಿ ಕಾರ್ಮಿಕರ ಅನೇಕ ಮಕ್ಕಳು ಇಂದು ಕಲಿತು ಪದವೀಧರರಾಗಿದ್ದಾರೆ. ಆದರೆ ಸರಕಾರ ಇಂದು ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮಾಡಿ ಬೀಡಿ ಕಾರ್ಮಿಕರ ಮಕ್ಕಳನ್ನು ವಿದ್ಯಾರ್ಥಿ ವೇತನ ಸಿಗುವಲ್ಲಿ ವಂಚಿತರನ್ನಾಗಿಸಿದೆ. ಬೀಡಿ ಕಾರ್ಮಿಕರು ಇಂಟರ್‍ನೆಟ್‍ನಂತಹ ತಂತ್ರe್ಞÁನವನ್ನು ಬಳಸಲು ಸಾಧ್ಯವಿಲ್ಲ ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕರ ಸರ್ವೇ ನಡೆಸಿ ಅವರಿಗೆ ಬೇಕಾದ ಸವಲತ್ತು ನೀಡುವ ಕಾರ್ಯ ಮಾಡಬೇಕು. ಚುನಾವಣೆ ನಡೆದ ಬಳಿಕ ಜನಪ್ರತಿನಿಧಿಗಳು ಜನರ ಬಳಿ ಬರಲ್ಲ. ತಮಗೆಷ್ಟು ಲಾಭ ನಷ್ಟದ ಲೆಕ್ಕಾಚಾರದಲ್ಲಿಯೇ ಮಗ್ನರಾಗಿರುತ್ತಾರೆ. ಆದರೆ ಸಿಪಿಎಂ ಚುನಾವಣೆಯಲ್ಲಿ ಗೆಲ್ಲಲ್ಲಿ ಅಥವಾ ಸೋಲಲಿ ಹೋರಾಟ ನಿರಂತರ. ಅಧಿಕಾರಕ್ಕಾಗಿ ಯಾವುದೇ ಹೋರಾಟವನ್ನು ನಡೆಸುವುದಿಲ್ಲ ಎಂದರು.
ನೋಂದಾವಣೆಯ ಪೂರ್ವಭಾವಿಯಾಗಿ ಮದಕ ಜಂಕ್ಷನ್‍ನಿಂದ ಅಂಬ್ಲಮೊಗರು ಗ್ರಾಮ ಪಂಚಾಯತ್ ಕಚೇರಿವರೆಗೆ ಮೆರವಣಿಗೆ ತೆರಳಿ ಕಾರ್ಮಿಕರ ನೋಂದಾವಣೆಯ ವಿವರವನ್ನು ಪಂಚಾಯತ್ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಮತ್ತು ಕಾರ್ಯದರ್ಶಿ ಅಬೂಬಕ್ಕಾರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಕೋಟೆಕಾರ್ ಬೀಡಿ ಲೇಬರ್ ಯೂನಿಯನ್‍ನ ಅಧ್ಯಕ್ಷೆ ಪದ್ಮಾವತಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ವಿಲಾಸಿನಿ ತೊಕ್ಕೊಟ್ಟು, ಉಪಾಧ್ಯಕ್ಷ ಸುಂದರ ಕುಂಪಲ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಶಾಲಿನಿ ಎಸ್. ಪೂಜಾರಿ, ಡಿವೈಎಫ್‍ಐ ಮುಖಂಡರಾದ ಇಬ್ರಾಹಿಂ ಮದಕ, ಮಹಮ್ಮದ್ ಲತೀಫ್, ಅಬ್ದುಲ್ ಲತೀಫ್, ಹೈದರ್, ಮಾದವ, ಅಬ್ಬಾಸ್, ಜಯಶ್ರೀ ಮದಕ, ಡಿವೈಎಫ್‍ಐ ಉಳ್ಳಾಲ ವಲಯದ ಮುಖಂಡ ಅಶೋಕ್ ಚೆಂಬುಗುಡ್ಡೆ ಉಪಸ್ಥಿತರಿದ್ದರು.